Advertisement

ಡಿಕೆಶಿ ಪ್ರತಿಕೃತಿ ದಹಿಸಿ ಪ್ರತಿಭಟನೆ

03:44 PM Oct 20, 2018 | |

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ವಿಷಯದಲ್ಲಿ ಲಿಂಗಾಯತ ವಿರೋಧಿ ಹೇಳಿಕೆ ನೀಡಿರುವ ಸಚಿವ ಡಿ.ಕೆ. ಶಿವಕುಮಾರ ಹೇಳಿಕೆ ಖಂಡಿಸಿ ನಗರದಲ್ಲಿ ರಾಷ್ಟ್ರೀಯ ಬಸವ ಸೇನೆ ಶಿವಕುಮಾರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು.

Advertisement

ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವಸೇನಾ ನೇತೃತ್ವದಲ್ಲಿ ಜಮಾಯಿಸಿದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು, ಸಚಿವ ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಡಾ| ರವಿಕುಮಾರ ಬಿರಾದಾರ, ಲಿಂಗಾಯತ ನಾಯಕರ ಏಳ್ಗೆ ಸಹಿಸದೇ ಈ ರೀತಿಯ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಲಿಂಗಾಯತರ ಸ್ವಾಭಿಮಾನ ಕೆಣಕಿ ಅಪಮಾನ ಮಾಡಿರುವ ಡಿ.ಕೆ. ಶಿವಕುಮಾರ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟದ ವಿಷಯದಲ್ಲಿ ನಮ್ಮ ಮನವಿಗೆ ಕಾನೂನಾತ್ಮಕ ಪರಿಶೀಲನೆ ನಡೆಸಿಯೇ ಮುಂದಿನ ಕ್ರಮ ಕೈಗೊಂಡಿದೆ. ಇದಕ್ಕಾಗಿ ನಿವೃತ್ತ ನ್ಯಾ|ನಾಗಮೋಹನದಾಸ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ಅವರ ವರದಿ ಪಡೆದು, ನಂತರ ವರದಿ ಅಧರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದರು. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರು ರಾಜಕೀಯ ಅಥವಾ ಪಕ್ಷಪಾತ ಮಾಡಿಲ್ಲ ಎಂದರು.

ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದು ವಾಸ್ತವ ಸ್ಥಿತಿಯನ್ನು ತಿಳಿದಿದ್ದರೂ ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಪ್ರಸ್ತಾವನೆ ವಿಷಯದಲ್ಲಿ ತಪ್ಪು ಮಾಡಿದೆ ಎಂದು ಡಿ.ಕೆ. ಶಿವಕುಮಾರ ಹೇಳಿಕೆ ನೀಡುವ ಮೂಲಕ ಲಿಂಗಾಯತರ ಆಸ್ಮಿತೆ ಪ್ರಶ್ನಿಸಿದ್ದಾರೆ. ಲಿಂಗಾಯತರ ಸ್ವಾಭಿಮಾನ ಕೆಣಕುವ ಮೂಲಕ ಸಚಿವ ಶಿವಕುಮಾರ ಅಕ್ಷಮ್ಯ ಅಪರಾಧ ಮಾಡಿದ್ದಾರೆ.

Advertisement

ಲಿಂಗಾಯತ ಧರ್ಮಿಯರಿಗೆ ಶಿವಕುಮಾರ ಹೇಳಿಕೆ ಮೂಲಕ ಅವಮಾನ ಮಾಡಿದ್ದು, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬಾರದೆಂಬ ದುರುದ್ದೇಶ ಹೊಂದಿದ್ದಾರೆ ಆರೋಪಿಸಿದರು. 

ಸಿದ್ದರಾಮಯ್ಯನವರ ಸರಕಾರ ಯಾವುದೇ ತಪ್ಪು ಮಾಡಿಲ್ಲ.ಧರ್ಮಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ ಏಕೆ ಗೆದ್ದಿಲ್ಲ ಎಂಬುದಕ್ಕೆ ಡಿಕೆಶಿ ಉತ್ತರಿಸಬೇಕು ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ಗಂಗಾಧರ ಸಾಲಕ್ಕಿ, ಶಾಂತವೀರ ಥಾಲಬಾವಡಿ, ಪ್ರದೀಪ ತೊರವಿ, ನಿಂಗಪ್ಪ ಸಂಗಾಪುರ, ಶರಣಗೌಡ ಬಿರಾದಾರ, ಜಗದೀಶ ಬಳೂತಿ,ಸಂಜಯ ಕೋಟ್ಯಾಳ, ಡಾ| ಮಹಾಂತೇಶ ಮಡಿಕೇಶ್ವರ, ಶಿವರಾಜ ಕೋಟ್ಯಾಳ, ಸುನೀಲ ಜಂಗಮಶೆಟ್ಟಿ, ನೀಲಕಂಠ ಹಳ್ಳಿ, ಅರುಣ ಹಳ್ಳಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next