Advertisement

ಐಟಿಗೆ ಮಾಹಿತಿ ನೀಡಿದ ಡಿಕೆಶಿ ಆಪ್ತ

09:09 AM Aug 09, 2017 | Team Udayavani |

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಬಂಧಿಕರು ಹಾಗೂ ಬೆಂಬಲಿಗರ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಉದ್ಯಮಿ ಸಚಿನ್‌ ನಾರಾಯಣ್‌ ಅವರ ಲೆಕ್ಕ ಪರಿಶೋಧಕ ಮೋಹನ್‌ ಮಂಗಳವಾರ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ.

Advertisement

ಶಿವಕುಮಾರ್‌ ಅವರ ಕೆಲ ವ್ಯವಹಾರಗಳ ಜತೆ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದ್ದು, ಸಚಿನ್‌ ನಾರಾಯಣ್‌ ತಮಗೆ ಸಂಬಂಧಿಸಿದ ಎಲ್ಲ ಆಸ್ತಿ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಐಟಿ ತನಿಖಾ ತಂಡದ ಮುಂದೆ ಸಲ್ಲಿಸಿದ್ದು, ಆದಾಯದ ಮೂಲಗಳ ಕುರಿತು ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಐಟಿ ದಾಳಿ ವೇಳೆ ಸಚಿನ್‌ ನಾರಾಯಣ್‌ ತನಿಖಾ ತಂಡದ ಮುಂದೆ ಅಘೋಷಿತ ಆಸ್ತಿಯ ಬಗ್ಗೆ ಹೇಳಿಕೆ ನೀಡಿದ್ದರು. ಈ ವೇಳೆ ಕೆಲ ಪ್ರಶ್ನೆಗಳಿಗೆ ದಾಖಲೆಗಳ ಮೂಲಕ ಪ್ರತಿಕ್ರಿಯೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಲೆಕ್ಕಪರಿಶೋಧಕರ ಮೂಲಕ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದೇ ವೇಳೆ ದಾಳಿಗೊಳಗಾದ ಇತರರು ಸಹ ವಿಚಾರಣೆಗೆ ಹಾಜರಾಗಿದ್ದು, ತಮ್ಮ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಐಟಿ ಮೂಲಗಳು ತಿಳಿಸಿವೆ.

ನೋಟಿಸ್‌ ಜಾರಿ: ಶಿವಕುಮಾರ್‌ ಅವರ ಆಪ್ತ ಆಂಜನೇಯ, ಶರ್ಮಾ ಟ್ರಾವೆಲ್ಸ್‌ ಮಾಲೀಕ ಹಾಗೂ ಮಾವ ತಿಮ್ಮಯ್ಯ ಸೇರಿದಂತೆ ಕೆಲ ಸಂಸ್ಥೆಗಳ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ದಾಳಿ ವೇಳೆ ಪತ್ತೆಯಾದ ಅಘೋ ಷಿತ ಆದಾಯ, ಆಸ್ತಿಯ ಮೂಲದ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದು, ಸದ್ಯದಲ್ಲೇ ಎಲ್ಲರೂ ಬರುವ ಸಾಧ್ಯತೆಯಿದೆ. ಒಟ್ಟಾರೆ ಈ ವಾರಾಂತ್ಯದಲ್ಲಿ ಎಲ್ಲರ ವಿಚಾರಣೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿಯಿಂದ ತನಿಖೆ ನಡೆಸಿ
ಬೆಂಗಳೂರು:
ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸ್ವಾಗತಾರ್ಹ ಬೆಳವಣಿಗೆ. ಆದರೆ ಈ ಪ್ರಕರಣವನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನೇಮಕಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌. ಆರ್‌. ಹಿರೇಮಠ ಒತ್ತಾಯಿಸಿದ್ದಾರೆ. ಈ ಹಿಂದೆ ರೆಡ್ಡಿ ಸಹೋದರರ ಬಳ್ಳಾರಿ ರಿಪಬ್ಲಿಕ್‌ ಇದ್ದಂತೆಯೇ ಈಗ ಡಿ.ಕೆ. ಶಿವಕುಮಾರ್‌ ಅವರದ್ದು “ಕನಕಪುರ ರಿಪಬ್ಲಿಕ್‌’ ಇದೆ. ಆದ್ದರಿಂದ ಗಣಿ ಧಣಿಗಳ ವಿರುದ್ಧ ನಡೆಸಿದ ತನಿಖೆಯ ಮಾದರಿಯಲ್ಲೇ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧವೂ ತನಿಖೆ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ
ಆಗ್ರಹಿಸಿದರು. ದಾಳಿಯಲ್ಲಿ 300 ಕೋಟಿಗೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದೆ. ಇದಲ್ಲದೆ, ಇದಲ್ಲದೆ, ಬೇನಾಮಿ ಆಸ್ತಿ ಮೇಲೂ ಅಧಿಕಾರಿಗಳು ತನಿಖೆ ನಡೆಸಬೇಕು ಎಂದ ಅವರು, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಲಾಗಿದೆ ಎಂದರು. ಡಿ.ಕೆ. ಶಿವಕುಮಾರ್‌ ವಿರುದ್ಧದ ತನಿಖೆಗಳು ನಿಷ್ಪಕ್ಷಪಾತವಾಗಿ ನಡೆಯಲು ಅನುವಾಗುವಂತೆ ತಕ್ಷಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಸಚಿವ ಸಂಪುಟದಿಂದ ಕೈಬಿಡಬೇಕು ಎಂದೂ ಆಗ್ರಹಿಸಿದರು.

ಐಟಿ ದಾಳಿಗೆ ತಿಂಗಳು ಮುಂಚಿನಿಂದಲೇ ತಯಾರಿ ನಡೆದಿತ್ತು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಒಂದು ತಿಂಗಳು ಬಿಟ್ಟು ಗುಜರಾತ್‌ ಶಾಸಕರು ಇಲ್ಲಿಗೆ ಬಂದ ಸಂದರ್ಭದಲ್ಲಿಯೇ ಏಕೆ ಐಟಿ ದಾಳಿ ನಡೆಯಿತು ಎನ್ನುವುದಕ್ಕೆ ಉತ್ತರ ನೀಡಬೇಕು. 
ಎಚ್‌.ಕೆ. ಪಾಟೀಲ್‌, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next