Advertisement

ದ.ಕ.: ಬಾಕಿ 10 ದಿಬ್ಬಗಳಲ್ಲೂ ಮರಳುಗಾರಿಕೆ

12:30 AM Jan 05, 2019 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾಗಿರುವ 22 ದಿಬ್ಬಗಳ ಪೈಕಿ ಮರಳು ತೆಗೆಯಲು ಅನುಮತಿಗೆ ಬಾಕಿಯಿರುವ 10 ದಿಬ್ಬಗಳಲ್ಲೂ ಮರಳುಗಾರಿಕೆಗೆ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಗಣಿಗಾರಿಕೆ ಸಚಿವ ರಾಜಶೇಖರ ಪಾಟೀಲ್‌ ಸೂಚಿಸಿದ್ದಾರೆ. 

Advertisement

ಮರಳು ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ವಿಧಾನ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಮೂರು ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ಜರಗಿತು.

12 ದಿಬ್ಬಗಳಲ್ಲಿ ಅರ್ಹ ಮರಳು ಗುತ್ತಿಗೆದಾರರಿಗೆ  ಮರಳು ತೆಗೆಯಲು ಅನುಮೋದನೆ ನೀಡಲಾಗಿದೆ. ಉಳಿದ 10 ದಿಬ್ಬಗಳಿಗೂ ಅನುಮತಿ ನೀಡಬೇಕು. ಇದರಿಂದ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಜಿಲ್ಲೆಯ ಶಾಸಕರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಕ್ರಮ ಕೈಗೊಂಡು ಬಾಕಿಯುಳಿದಿರುವ 10 ದಿಬ್ಬಗಳಲ್ಲೂ ಜ. 12ರೊಳಗೆ ಅರ್ಹ ಗುತ್ತಿಗೆದಾರರಿಗೆ ಮರಳುಗಾರಿಕೆಗೆ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ನಾನ್‌ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಸಂಬಂಧಪಟ್ಟು ಇರುವ ಸಮಸ್ಯೆಗಳ ಕುರಿತಂತೆ ಶಾಸಕರು ಸಭೆಯಲ್ಲಿ ಸಚಿವರ ಗಮನ ಸೆಳೆದು ಇದರಲ್ಲಿ ಕೆಲವು ನಿಯಮಗಳಿಂದಾಗಿ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಯಮಗಳನ್ನು ಸಡಿಲುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಕೂಡಲೇ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

ದರ ನಿಗದಿ
ಮರಳುಗಾರಿಕೆ ಆರಂಭವಾಗಿದ್ದರೂ ಜನರಿಗೆ ಮರಳು ಸಿಗುತ್ತಿಲ್ಲ, ದರ ದುಬಾರಿಯಾಗಿದೆ. ಹಾಗಾಗಿ ಮರಳಿಗೆ ನಿರ್ದಿಷ್ಟ ದರ ನಿಗದಿಪಡಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಕೂಡಲೇ ಮರಳು ಗುತ್ತಿಗೆದಾರರ ಸಭೆ ಕರೆದು ಮರಳು ದರವನ್ನು ನಿಗದಿಪಡಿಸಲಾಗುವುದು. ಮರಳಿಗೆ ಸಂಬಂಧಪಟ್ಟಂತೆ ಜನರ ದೂರು ಹಾಗೂ ಬೇಡಿಕೆಗಳಿಗೆ ಸ್ಪಂದಿಸಲು ಕಾಲ್‌ಸೆಂಟರ್‌ ಸ್ಥಾಪಿಸುವುದಾಗಿ ದ.ಕ.ಜಿಲ್ಲಾಧಿಕಾರಿಯವರು ತಿಳಿಸಿದರು ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ. 

Advertisement

ಸರಕಾರಿ ಏಜೆನ್ಸಿಗಳಿಗೆ ಅವಕಾಶ
ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆಗೆ ಅರ್ಹ ಗುತ್ತಿಗೆದಾರರು ಲಭ್ಯವಾಗದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಗ್ರಾ.ಪಂ.ಗಳು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆಗಳಿಗೆ ಮರಳುಗಾರಿಕೆಯನ್ನು ವಹಿಸಿಕೊಡುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟ ಜಿಲಾಧಿಕಾರಿಗಳು ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಸಚಿವರು ಸಭೆಯಲ್ಲಿ ಸೂಚಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next