ಮಹಾನಗರ: ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಲ್ಲಿ ( ಪಿಎಂಇಜಿಪಿ) ದಕ್ಷಿಣ ಕನ್ನಡ ಜಿಲ್ಲೆ ಕಳೆದ ಮೂರು ವರ್ಷಗಳಿಂದ ಗುರಿ ಮೀರಿದ ಸಾಧನೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. 2020-21ನೇ ಸಾಲಿನಲ್ಲಿ ಜಿಲ್ಲೆ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಪಿಎಂಇಜಿಪಿ ಯೋಜನೆ ಜಿಲ್ಲಾ ಕೈಗಾರಿಕೆ ಕೇಂದ್ರ (ಡಿಐಸಿ), ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (ಕೆವಿಐಬಿ) ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ (ಕೆವಿಐಸಿ) ಇಲಾಖೆಗಳ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪ್ರತಿವರ್ಷ ಜಿಲ್ಲೆಗಳಿಗೆ ನಿರ್ದಿಷ್ಟ ಗುರಿಯನ್ನು ನೀಡಲಾಗುತ್ತಿದೆ. ಇದರಂತೆ 2018-19ರಲ್ಲಿ ದ.ಕ. ಜಿಲ್ಲೆಗೆ ಡಿಐಸಿಗೆ 40 ಕೆವಿಐಬಿಗೆ 35, ಕೆವಿಐಸಿಗೆ 35 ಸೇರಿ ಒಟ್ಟು 110 ಭೌತಿಕ ಗುರಿ ನೀಡಲಾಗಿತ್ತು. ಆದರೆ ನಿಗದಿತ ಗುರಿಯನ್ನು ಮೀರಿ ಸಾಧನೆ ದಾಖಲಾಗಿತ್ತು. ಡಿಐಸಿಯಿಂದ 148, ಕೆವಿಐಬಿಯಿಂದ 46, ಕೆವಿಐಸಿಯಿಂದ 33 ಸೇರಿ ಒಟ್ಟು 227 ಮಂದಿಗೆ ಯೋಜನೆ ಮಂಜೂರು ಮಾಡಲಾಗಿತ್ತು.
2019-20ರಲ್ಲಿ ಡಿಐಸಿಗೆ 48, ಕೆವಿಐಬಿಗೆ 36, ಕೆವಿಐಸಿಗೆ 38 ಸೇರಿ ಜಿಲ್ಲೆಗೆ ಒಟ್ಟು 122 ಭೌತಿಕ ಗುರಿ ನಿಗದಿಪಡಿಸಲಾಗಿತ್ತು. ಈ ವರ್ಷವೂ ನಿಗದಿತ ಗುರಿಗಿಂತ ದುಪ್ಪಟ್ಟು ಮಂದಿಗೆ ಯೋಜನೆ ಮಂಜೂರು ಮಾಡಲಾಗಿತ್ತು. ಡಿಐಸಿಗೆ 252, ಕೆವಿಐಬಿಗೆ 61, ಕೆವಿಐಸಿಗೆ 37 ಸೇರಿಒಟ್ಟು 325 ಮಂದಿಗೆ ಯೋಜನೆಯಲ್ಲಿ ಉದ್ಯೋಗ ಸ್ಥಾಪನೆಗೆ ಸಾಲ ಮಂಜೂರು ಮಾಡಲಾಗಿತ್ತು.
2020-21ರಲ್ಲಿ ಡಿಐಸಿಗೆ 156, ಕೆವಿಐಬಿಗೆ 80, ಕೆವಿಐಸಿಗೆ 45 ಸೇರಿ ಒಟ್ಟು 281 ಗುರಿ ನೀಡಲಾಗಿತ್ತು. ಇದರಲ್ಲಿ ಡಿಐಸಿಗೆ 230, ಕೆವಿಐಬಿಗೆ 121, ಕೆವಿಐಸಿಗೆ 36 ಸೇರಿ ಒಟ್ಟು 387 ಮಂದಿಗೆ ಮಂಜೂರು ಮಾಡಲಾಗಿತ್ತು. 2021-22ನೇ ಸಾಲಿನಲ್ಲಿ 312 ಗುರಿ ನೀಡಲಾಗಿದ್ದು ಫೆ.13ರವರೆಗೆ 356 ಮಂದಿಗೆ ಮಂಜೂರು ಮಾಡಲಾಗಿದೆ. ಪಿಎಂಇಜಿಪಿ ಅಂಕಿಅಂಶದಂತೆ 2018- 19ರಲ್ಲಿ 2279,2019-20ರಲ್ಲಿ 3103 ಹಾಗೂ 2021-21ರಲ್ಲಿ 3,424 ಸಹಿ ತ ಒಟ್ಟು 8,795 ಉದ್ಯೋಗ ಸೃಷ್ಟಿಯಾಗಿದೆ.
ಯೋಜನೆಯಲ್ಲಿ ಆಯ್ಕೆಯಾದವರಿಗೆ ಒಟ್ಟು ಸಾಲದ ಮೇಲೆ ನಗರ ಪ್ರದೇಶಕ್ಕೆ ಗರಿಷ್ಠ ಶೇ. 25, ಗ್ರಾಮೀಣ ಪ್ರದೇಶಕ್ಕೆ ಗರಿಷ್ಠ ಶೇ. 35ರ ವರೆಗೆ ಸಹಾಯಧನವಿರುತ್ತದೆ. ನಗರ ಪ್ರದೇಶದಲ್ಲಿ ಸಾಮಾನ್ಯವರ್ಗಕ್ಕೆ ಶೇ.15 ಹಾಗೂ ವಿಶೇಷ ವರ್ಗದಡಿಯಲ್ಲಿ ಬರುವ ಪರಿಶಿಷ್ಠ ಜಾತಿ, ಪಂಗಡ, ಮಹಿಳೆಯರು, ಅಂಗ ವಿ ಕ ಲರು, ಹಿಂದುಳಿದವರ್ಗಕ್ಕೆ ಹೆಚ್ಚುವರಿಯಾಗಿ ಶೇ.10 ಸಹಾಯಧನವಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವರ್ಗಕ್ಕೆ ಶೇ. 25, ವಿಶೇಷ ವರ್ಗಕ್ಕೆ ಶೇ. 35 ಸಹಾಯಧನವಿರುತ್ತದೆ. ಪಿಎಂಇಜಿಪಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಿಂದ ಹಿಡಿದು ಸಾಲ ಬಿಡುಗಡೆ ವರೆಗೆ ಎಲ್ಲ ಪ್ರಕ್ರಿಯೆಗಳು ಸಂಪೂರ್ಣ ಅನ್‌ಲೈನ್‌ನಲ್ಲಿ ನಡೆಯುತ್ತದೆ.
ಜಿಲ್ಲೆಯಲ್ಲಿ ಪಿಎಂಇಜಿಪಿ ಯೋಜನೆ ಸಾಧನೆ ಅತ್ಯುತ್ತಮವಾಗಿದೆ. ಕಳೆದ ಸಾಲಿನಲ್ಲಿ ಸಾಧನೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಬ್ಯಾಂಕ್‌ಗಳು ಕೂಡ ವಿಶೇಷ ಆಸಕ್ತಿ ವಹಿಸಿ ಹೆಚ್ಚಿನ ಮಂದಿಗೆ ಸಾಲ ಮಂಜೂರಾತಿ ನೀಡುತ್ತದೆ ಎನ್ನುತ್ತಾರೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಅವರು.
ವಿಶೇಷ ಸಾಧನೆ :
ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಪಿಎಂಇಜಿಪಿ ಯೋಜನೆಯಲ್ಲಿ ವರ್ಷಂಪ್ರತಿ ಗುರಿಮೀರಿದ ಸಾಧನೆ ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಜಿಲ್ಲೆಗೆ ಪ್ರತಿವರ್ಷ ನಿಗದಿತ ಗುರಿಗಿಂತ ಹೆಚ್ಚುವರಿಯಾಗಿ ಮಂಜೂರಾತಿಗೆ ಅವಕಾಶ ನೀಡುತ್ತಿದೆ. ಜಿಲ್ಲೆಯ ಸಂಸದರು ಕೂಡ ಇದರಲ್ಲಿ ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯಲ್ಲಿ ಹೆಚ್ಚು ಮಂದಿಗೆ ಯೋಜನೆಯ ಪ್ರಯೋಜನ ಲಭ್ಯವಾಗುವಂತೆ ಮಾಡುತ್ತಿದ್ದಾರೆ.
–ಗೋಕುಲ್‌ದಾಸ್ ನಾಯಕ್, ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕರು