ಮಂಗಳೂರು: ಕೇಂದ್ರ ಅಥವಾ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಜಾರಿಗೆ ತಂದರೆ ಅದನ್ನು ಬೆಂಬಲಿಸುವುದಾಗಿ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಮಾಂಸ ಭಕ್ಷಣೆ ಮುಸ್ಲಿಂ ಸಮುದಾಯದ ಕಡ್ಡಾಯ ಆಹಾರ ಪದ್ಧತಿ ಅಲ್ಲ. ಅಕ್ರಮಗೋಸಾಗಾಟ, ಗೋಮಾಂಸ ಮಾರಾಟಕ್ಕೆ ಮುಸ್ಲಿಮರ ವಿರೋಧವಿದೆ ಎಂದರು.
ಸಾಮಾಜಿಕ ಸಾಮರಸ್ಯಕ್ಕಾಗಿ ಜಾನುವಾರು ಅಕ್ರಮ ಸಾಗಾಟಕ್ಕೆ ಅವಕಾಶ ನೀಡದಂತೆ ಫತ್ವಾ ಹೊರಡಿಸುವಂತೆ ಧಾರ್ಮಿಕ ಗುರುಗಳಲ್ಲಿ ಮನವಿ ಮಾಡಲಾಗುವುದು. ಅಧಿಕೃತವಾದ ಕಸಾಯಿಖಾನೆಯು ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿ ಮಾತ್ರ ಇದೆ. ಇದರಿಂದಾಗಿ ಗೋವುಗಳ ಅಕ್ರಮ ಸಾಗಾಟ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಪ್ರತಿ ತಾಲೂಕಿನಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಬೇಕು. ಇದರಿಂದ ಕಾನೂನು ಪ್ರಕಾರ ಜಾನುವಾರು ಹತ್ಯೆಗೆ ಅವಕಾಶವಿರುತ್ತದೆ ಎಂದರು.
ಒಕ್ಕೂಟದ ಸದಸ್ಯರಾದ ಸಿ.ಎಂ. ಮುಸ್ತಾಫ, ಮಹಮ್ಮದ್ ಹನೀಫ್, ಸಿದ್ದಿಕ್ ತಲಪಾಡಿ, ಅಬ್ದುಲ್ ಜಲೀಲ್, ವಿ.ಎಚ್. ಕರೀಂ, ಅಹಮ್ಮದ್ ಬಾವಾ ಬಜಾಲ್, ಮೊಮ್ಮದ್ ಅಶ್ರಫ್ ಬದ್ರಿಯಾ ಉಪಸ್ಥಿತರಿದ್ದರು.