ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದರ ಕಾಲದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಆವಿಸ್ಮರಣೀಯ. ಆದರೆ ಬಿಜೆಪಿ ಸಂಸದರು ಆಯ್ಕೆಯಾದ ಬಳಿಕ ಮತ್ತು ಮೋದಿ ಆಡಳಿತದ ಕಾಲದಲ್ಲಿ ಜಿಲ್ಲೆಗೆ ಯಾವುದೇ ಯೋಜನೆಗಳು ಬಂದಿಲ್ಲ. ಜಿಲ್ಲೆಗೆ ಮೋದಿ ಕೊಡುಗೆ ಶೂನ್ಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದರು.
ಬುಧವಾರ ಕಾಂಗ್ರೆಸ್-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಎಂದು ಕೂಗುವವರು ಜಿಲ್ಲೆಗೆ ಮೋದಿ ಏನು ಕೊಟ್ಟಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳ ಬೇಕು. ಬದಲಾಗಿ, ಜಿಲ್ಲೆಯಲ್ಲಿದ್ದ ಪ್ರತಿಷ್ಠಿತ ಯೋಜನೆಯನ್ನು ಸ್ಥಳಾಂತರ ಮಾಡಿದ್ದು ಬಿಜೆಪಿ ಸಾಧನೆಯಾಗಿದೆ ಎಂದರು.
ವಿಜಯ ಬ್ಯಾಂಕ್ ವಿಲೀನಕ್ಕೆ ಕಾಂಗ್ರೆಸ್ ಕಾರಣ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ ಮನಮೋಹನ್ ಸಿಂಗ್ ಆಡಳಿತದ ಸಂದರ್ಭ ನಳಿನ್ ಅವರೇ ದ.ಕ. ಸಂಸದರಾಗಿದ್ದರು. ಆಗ ಯಾಕೆ ಮಾತೆತ್ತಿಲ್ಲ ಎಂದವರು ಪ್ರಶ್ನಿಸಿದರು.
ಸಂಸದ ನಳಿನ್ ಜಿಲ್ಲೆಗೆ ಸಾವಿರಾರು ಕೋ.ರೂ.ಗಳ ಯೋಜನೆ ತಂದಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ರೈ, ಸಿಎಸ್‌ಆರ್ ಫಂಡ್‌ನಲ್ಲಿ ಆಗುವ ಯೋಜನೆಯನ್ನೂ ತನ್ನದೇ ಸಾಧನೆ ಎಂದು ಬೋರ್ಡ್ ಹಾಕುವವರು ಬಿಜೆಪಿಯವರು. ಯಾವ ಯೋಜನೆಗೆ ಎಷ್ಟು ಹಣ ಎಲ್ಲಿಗೆ ಬಂದಿದೆ ಎಂಬ ಬಗ್ಗೆ ಅವರಿಗೇ ಗೊತ್ತಿರಲಾರದು ಎಂದರು.
ಯು.ಟಿ. ಖಾದರ್, ಹರೀಶ್ ಕುಮಾರ್, ಶಕುಂತಳಾ ಶೆಟ್ಟಿ, ಯು.ಕೆ.ಮೋನು, ವಸಂತ ಪೂಜಾರಿ, ಸುಶೀಲ್ ನೊರೊನ್ಹಾ, ಬಿ. ಇಬ್ರಾಹಿಂ, ಹೈದರ್ ಪರ್ತಿಪ್ಪಾಡಿ ಇದ್ದರು.