Advertisement

ದ.ಕ. ಅಭಿವೃದ್ಧಿಗೆ ಮಲ್ಯ ಕೊಡುಗೆ ಅಪಾರ

12:37 PM Dec 09, 2017 | Team Udayavani |

ಮಂಗಳೂರು: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಅತ್ಯಂತ ಪರಿಪೂರ್ಣ ನೆಲೆಯಲ್ಲಿ ನಿರ್ವಹಿಸಿಕೊಂಡ
ಯು. ಶ್ರೀನಿವಾಸ ಮಲ್ಯ ಅವರ ಕೊಡುಗೆ ಅಪಾರ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. 

Advertisement

ಪುರಭವನದಲ್ಲಿ ಶುಕ್ರವಾರ ಅವರು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ ಪ್ರದಾನ ಸಮಾ ರಂಭ ವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದರು. ಹೆದ್ದಾರಿ, ರೈಲ್ವೇ, ಸ್ವತಂತ್ರ ರೇಡಿಯೋ ಸ್ಥಾಪನೆ, ವಿಮಾನ ನಿಲ್ದಾಣ, ರಾಸಾಯನಿಕ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನು ವಿಶ್ವಮಟ್ಟಕ್ಕೆ ಏರಿಸಿದ ಕೀರ್ತಿ ಮಲ್ಯರಿಗೆ ಸೇರುತ್ತದೆ. ಸರಕಾರದ ಎಲ್ಲ ಯೋಜನೆ ಗಳನ್ನು ತನ್ನೂರಿಗೆ ತಂದಿದ್ದ ಅವರು ಹಾಲಿ ಜನ ಪ್ರತಿನಿಧಿಗಳಿಗೂ ಆದರ್ಶರಾಗಿದ್ದಾರೆ. ಆದರ್ಶ ಜಿಲ್ಲೆ ಯಾಗಿ ರೂಪಿಸಲು ಅವರು ಪಟ್ಟ ಶ್ರಮದ ಫ‌ಲ ವನ್ನು ನಾವಿಂದು ಉಣ್ಣುತ್ತಿದ್ದೇವೆ ಎಂದರು. ಸಾಧಕ ರನ್ನು ಗೌರವಿಸುವುದು ಸಮಾಜದ ಕರ್ತವ್ಯ ಮತ್ತು ಅದು ಸಾಧಕರಿಗೆ ಸ್ಫೂರ್ತಿ ಎಂದು ವಿವರಿಸಿದ ಡಾ| ಹೆಗ್ಗಡೆ ಅವರು, ಮಹಾನಗರ ಪಾಲಿಕೆಯ ಮೇಯರ್‌ ಕವಿತಾ ಸನಿಲ್‌ ನೇತೃತ್ವದ ಈ ಪರಿಕಲ್ಪನೆ ಶ್ಲಾಘನೀಯ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಶ್ರೀನಿವಾಸ ಮಲ್ಯ ಅವರು ಜಿಲ್ಲೆಯ ಅಭಿವೃದ್ಧಿಗೆ ವಿಶೇಷವಾಗಿ ಕೊಡುಗೆ ನೀಡಿದ್ದು, ಅವರ ನೆನಪಿನಲ್ಲಿ ಮಂಗಳೂರು ಪಾಲಿಕೆಯು ಸಾಧಕರನ್ನು ಗುರುತಿಸುವ ಮೂಲಕ ಮಲ್ಯರನ್ನು ನೆನಪಿಸುವ ಕಾರ್ಯ ನಡೆಸಿದೆ, ಇದು ಶ್ಲಾಘನೀಯ ಎಂದರು.

ಶಾಸಕರಾದ ಜೆ. ಆರ್‌. ಲೋಬೋ, ಐವನ್‌ ಡಿ’ಸೋಜ, ಪಾಲಿಕೆಯ ವಿವಿಧ ಸ್ಥಾಯೀ ಸಮಿತಿ ಗಳ ಅಧ್ಯಕ್ಷರಾದ ಅಬ್ದುಲ್‌ ರವೂಫ್‌, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್‌, ಆಯುಕ್ತ ಮೊಹಮ್ಮದ್‌ ನಜೀರ್‌, ಎಸ್‌. ಕೆ. ಮುನಿಸಿಪಲ್‌ ಎಂಪ್ಲಾಯೀಸ್‌ ಯೂನಿಯನ್‌ ಅಧ್ಯಕ್ಷ ಬಾಲು ಮುಖ್ಯ ಅತಿಥಿಗಳಾಗಿದ್ದರು. 

ಮಲ್ಯರ ಆದರ್ಶ: ಮೇಯರ್‌ 
ಮಂಗಳೂರು ಕೇಂದ್ರವಾಗಿರಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಯನ್ನು ಕಟ್ಟಿದ ಕೀರ್ತಿ ಉಳ್ಳಾಲ ಶ್ರೀನಿವಾಸ ಮಲ್ಯರಿಗೆ ಸಲ್ಲುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಕವಿತಾ ಸನಿಲ್‌ ಹೇಳಿದರು. ಮಲ್ಯ ರಿಂದಾಗಿ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ಎನ್‌ಎಂಪಿಟಿ, ರೈಲು, ಎನ್‌ಐಟಿಕೆ (ಆಗಿನ ಕೆಆರ್‌ಇಸಿ) ಮುಂತಾದ ಸೌಲಭ್ಯ ಜಿಲ್ಲೆಗೆ ದೊರೆಯಿತು. ಅವರ ಹೆಸರಿನಲ್ಲಿ ಗೌರವ ಪ್ರಶಸ್ತಿಗಳನ್ನು ನೀಡುತ್ತಿರುವುದು ಪಾಲಿಕೆಗೆ ಹೆಮ್ಮೆಯ ಸಂಗತಿ ಎಂದರು. 

Advertisement

ಮುಖ್ಯ ಸಚೇತಕ, ಮಾಜಿ ಮೇಯರ್‌ ಎಂ. ಶಶಿಧರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಯ್ಕೆ ಸಮಿತಿಯ ಸದಸ್ಯ ಮನೋಹರ ಪ್ರಸಾದ್‌ ನಿರೂಪಿಸಿ ದರು. ಉಪ ಮೇಯರ್‌ ರಜನೀಶ್‌ ವಂದಿಸಿದರು.

ಮಲ್ಯರಿಗೆ ಗೌರವ
ಉಳ್ಳಾಲ ಶ್ರೀನಿವಾಸ ಮಲ್ಯರ ಭಾವಚಿತ್ರಕ್ಕೆ ಅತಿಥಿಗಳು ಹೂಹಾರ ಸಮರ್ಪಿಸಿ ಗೌರವಿಸಿ ದರು. ಶಾಲು, ಹಾರ, ಫಲವಸ್ತು, ಸ್ಮರಣಿಕೆ, ಸಮ್ಮಾನಪತ್ರದೊಂದಿಗೆ ಗೌರವ ಪ್ರಶಸ್ತಿಯು ಒಂದು ಲಕ್ಷ ರೂ., ಸಾಧನಾ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದನ್ನು ಒಳಗೊಂಡಿದೆ. ಗೌರವ ಪ್ರಶಸ್ತಿಯನ್ನು ಡಾ| ಕದ್ರಿ ಗೋಪಾಲ ನಾಥ್‌, ಕಲಾವಿಭಾಗದಲ್ಲಿ ಅಗರಿ ರಘುರಾಮ ಭಾಗವತರು, ಶಿಕ್ಷಣ ಕ್ಷೇತ್ರದಲ್ಲಿ ಕೆ.ಎ. ರೋಹಿಣಿ ಮತ್ತು ಕ್ರೀಡಾ ವಿಭಾಗದಲ್ಲಿ ಎಂ.ಆರ್‌. ಪೂವಮ್ಮ  ಪ್ರಶಸ್ತಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next