ಬೆಂಗಳೂರು:ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಪಾದಯಾತ್ರೆ ಬಿಜೆಪಿಗಿಂತಲೂ ಹೆಚ್ಚಾಗಿ ಜೆಡಿಎಸ್ ನಾಯಕರ ಕಣ್ಣು ಕೆಂಪಗಾಗಿಸಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ವರ್ಚಸ್ಸು ವೃದ್ಧಿ ಮಾಡಿಕೊಳ್ಳುವುದಕ್ಕೆ ಡಿ.ಕೆ.ಶಿವಕುಮಾರ್ ಈ ಯಾತ್ರೆಯ ಮೂಲಕ ಮುಂದಾಗಿರುವುದು ಜೆಡಿಎಸ್‌ನ್ನು ಕೆರಳಿಸಿದೆ.
ಹೇಳಿ ಕೇಳಿ ರಾಮನಗರ ಜಿಲ್ಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಮಧ್ಯೆ ದಶಕಗಳಿಂದಲೂ “ಸ್ಪರ್ಧಾ ಅಖಾಡʼʼವಾಗಿದೆ. ಪರಿಸ್ಥಿತಿ ಹಾಗೂ ಅಧಿಕಾರದ ವಾಲುವಿಕೆಗೆ ಅನುಸಾರವಾಗಿ ಇಬ್ಬರೂ ಈ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಮೇಲುಗೈ ಸಾಧಿಸುವುದಕ್ಕೆ ತಂತ್ರಗಾರಿಕೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಮೇಕೆದಾಟು ಪಾದಯಾತ್ರೆ ಇದೇ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಡಿ.ಕೆ.ಶಿವಕುಮಾರ್ ಗೆ ಪೊಲಿಟಿಕಲ್ ಮೈಲೇಜ್ ಕೊಡುವ ಸಾಧ್ಯತೆ ಇರುವುದರಿಂದ ಕುಮಾರಸ್ವಾಮಿ ವಿರೋಧದ ದಾಳ ಉರುಳಿಸಿದ್ದಾರೆ.
ನೀರಿಗಾಗಿ ಅಲ್ಲ : ಮೇಕೆದಾಟು ಹೆಸರು ಹೇಳಿಕೊಂಡು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆಯ ಉದ್ದೇಶವೇ ಬೇರೆ. ಮತಕ್ಕಾಗಿ ನಡೆಸುತ್ತಿರುವ ಪಾದಯಾತ್ರೆಯೇ ಹೊರತು ಕುಡಿಯುವ ನೀರಿಗಾಗಿ ಅಲ್ಲ. ಮೇಕೆದಾಟು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕನಸಿನ ಕೂಸು. 1996ರಲ್ಲಿ ಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಇದಕ್ಕೆ ನೀಲನಕ್ಷೆ ರೂಪಿಸಿದ್ದರು. ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ತಯಾರಿಸಲಾಗಿದ್ದು, ಈ ಸಂಬಂಧ ಹಲವು ಬಾರಿ ಪ್ರಧಾನಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. “ನಮ್ಮ ಶ್ರಮವನ್ನು ತಮ್ಮ ಕೊಡುಗೆ “ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ ಎಂದು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೇಕೆದಾಟುವಿನಿಂದ ಬೆಂಗಳೂರಿನ ಕೆಂಗೇರಿವರೆಗೆ ಸುಮಾರು 100 ಕಿಮೀ, ನಗರ ವ್ಯಾಪ್ತಿಯಲ್ಲಿ 50 ಕಿಮೀ ಸೇರಿ ಬೆಂಗಳೂರು ಹೊರ ವಲಯದ 20 ಕ್ಷೇತ್ರಗಳಲ್ಲಿ ಈ ಪಾದಯಾತ್ರೆ ನಡೆಯುತ್ತದೆ. ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿರುವುದರಿಂದ “ವಾಟರ್ ಪಾಲಿಟಿಕ್ಸ್ “ ಗೆ ಮಹತ್ವ ಲಭಿಸಿದೆ.
ಚುನಾವಣೆ ಹಿನ್ನೆಲೆಯಲ್ಲೇ ಪಾದಯಾತ್ರೆ ಆಯೋಜನೆಗೊಂಡಿರುವುದರಿಂದ ಹಳೆ ಮೈಸೂರು ಭಾಗದ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಪ್ರಾಬಲ್ಯದ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಹಾಸನ, ತುಮಕೂರು ಹಾಗೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಒಟ್ಟಾರೆ ನಾಯಕತ್ವದ ಮೇಲೆ ಇದು ಪ್ರಭಾವ ಬೀರಲಿದೆ. ಈಗಾಗಲೇ ಜೆಡಿಎಸ್ ಶಾಸಕರು ಹಾಗೂ ನಾಯಕರನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳುವ ಕೆಲಸಕ್ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚಾಲನೆ ನೀಡಿರುವುದು ಕುಮಾರಸ್ವಾಮಿಯವರನ್ನು ಕೆರಳಿಸಿದೆ. ಇದರ ಮಧ್ಯೆಯೇ ಆಯೋಜಿಸಿರುವ ಪಾದಯಾತ್ರೆ ತಮ್ಮ ಪಕ್ಷದ ಬೆಳವಣಿಗೆಗೆ ಅಡ್ಡಿಯುಂಟು ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಈಗ ಅಖಾಡಕ್ಕೆ ಇಳಿದಿದ್ದಾರೆ.
ಈ ಕಾರಣಕ್ಕಾಗಿಯೇ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಬಿಜೆಪಿ ವಿಚಲಿತಗೊಂಡಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ನಡೆಯುವ ಪೈಪೋಟಿಯ ಮಧ್ಯೆ ಹಳೆ ಮೈಸೂರು ಭಾಗದಲ್ಲಿ ಪ್ರತ್ಯೇಕ ತಂತ್ರ ಅನುಸರಿಸಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಇವರಿಬ್ಬರ ಜಗಳದ ಮಧ್ಯೆ ಸದ್ಯಕ್ಕೆ ತಟಸ್ಥವಾಗಿ ಉಳಿಯಬೇಕೆಂಬುದು ಕಮಲ ಪಾಳಯದ ಲೆಕ್ಕಾಚಾರ.