Advertisement

ದ.ಕ. ಕ್ಷೇತ್ರ: ನಳಿನ್‌ ಬಿಜೆಪಿ ಅಭ್ಯರ್ಥಿ

01:00 AM Mar 22, 2019 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ನಳಿನ್‌ ಹೆಸರು ಘೋಷಣೆಯಾಗಿದೆ. ಕ್ಷೇತ್ರದಲ್ಲಿ ಚಟುವಟಿಕೆಗಳು ಬಿರುಸುಗೊಳ್ಳುತ್ತಿದೆ. 

Advertisement

ಆದರೆ ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಯಾರು ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಸಹಕಾರಿ ಧುರೀಣ ಎಂ.ಎನ್‌. ರಾಜೇಂದ್ರ ಕುಮಾರ್‌, ಮಿಥುನ್‌ ರೈ ಸಹಿತ ಹಲವು ಮಂದಿ ರೇಸ್‌ನಲ್ಲಿದ್ದಾರೆ. ಯಾರಿಗೆ ಟಿಕೆಟ್‌ ನೀಡಬೇಕೆಂದು ತೀರ್ಮಾನಿಸಲು ಹೈಕಮಾಂಡ್‌ಗೆ ಇನ್ನೂ ಸಾಧ್ಯವಾಗಿಲ್ಲ. ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆಯುವ ಮಹತ್ವದ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಪೈಪೋಟಿ ದಿಲ್ಲಿಗೆ
ಗುರುವಾರ ಸಂಜೆ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರು ಹೊಸದಿಲ್ಲಿಗೆ ತೆರಳಿದ್ದು, ಸಭೆ ನಿಗದಿಯಾಗಿತ್ತು. ಇದರಲ್ಲಿ ಕೇಂದ್ರದ ಕಾಂಗ್ರೆಸ್‌ ಪ್ರಮುಖರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಕೊಂಚ ಬದಲಾ ವಣೆಯಾಗಿ, ಸಭೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ. 

ಎಲ್ಲ ಆಕಾಂಕ್ಷಿಗಳ ಜತೆಗೆ ಜಿಲ್ಲೆಯ ಪ್ರಮುಖ ಹಾಲಿ- ಮಾಜಿ ನಾಯಕರಿಗೆ ತುರ್ತಾಗಿ ಹೊಸದಿಲ್ಲಿಗೆ ಬರುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಬುಧವಾರ ಸಂಜೆ ಬುಲಾವ್‌ ನೀಡಿತ್ತು. ರಮಾನಾಥ ರೈ, ಬಿ.ಕೆ. ಹರಿಪ್ರಸಾದ್‌, ಐವನ್‌ ಡಿ’ಸೋಜಾ, ವಿನಯ ಕುಮಾರ್‌ ಸೊರಕೆ, ಮಿಥುನ್‌ ರೈ, ಯು.ಕೆ. ಮೋನು ಮತ್ತಿತರರು ತೆರಳಿದ್ದಾರೆ. 
ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹೊಸದಿಲ್ಲಿಯಲ್ಲಿ ಗುರುವಾರ ಸಂಜೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಒಂದು ಹಂತದ ಸಭೆ ನಡೆದಿದೆ. ಈ ಸಭೆಯಲ್ಲಿ ಸಚಿವ ಖಾದರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ನೀಡಿದರೂ ಉಳಿದೆಲ್ಲ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು. ಗೊಂದಲ ಅಥವಾ ಬಂಡಾಯಕ್ಕೆ ಆಸ್ಪದ ನೀಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ವೇಣುಗೋಪಾಲ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವಸನೀಯ ಮೂಲಗಳ ಪ್ರಕಾರ, ಟಿಕೆಟ್‌ ವಿಚಾರವಾಗಿ ಮೂರ್‍ನಾಲ್ಕು ನಾಯಕರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಹಿರಿಯರಿಗೆ ಆದ್ಯತೆ ನೀಡುವುದಾದರೆ ರಮಾನಾಥ ರೈ ಹಾಗೂ ವಿನಯ ಕುಮಾರ್‌ ಸೊರಕೆ ಪೈಕಿ ಒಬ್ಬರಿಗೆ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಹೊಸಬರಾದರೆ, ಮಿಥುನ್‌ ರೈ ಹೆಸರನ್ನು ಪರಿಗಣಿಸಲಾಗುತ್ತದೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಈ ನಡುವೆ ಡಾ| ರಾಜೇಂದ್ರ ಕುಮಾರ್‌ ಮತ್ತು ಬಿ.ಕೆ. ಹರಿಪ್ರಸಾದ್‌ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಪ್ರಭಾವ ಬಳಸಿದರೆ ಇವರಿಬ್ಬರ ಪೈಕಿ ಒಬ್ಬರ ಪಾಲಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

Advertisement

3ನೇ ಬಾರಿ ಸ್ಪರ್ಧೆ
ನಳಿನ್‌ ಕುಮಾರ್‌ 3ನೇ ಬಾರಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2009ರಲ್ಲಿ ಮೊದಲ ಬಾರಿಗೆ ಅವರು ಬಿಜೆಪಿ ಅಭ್ಯರ್ಥಿಯಾಗಿ ಅವಕಾಶ ಪಡೆದು ಆಯ್ಕೆಯಾಗಿದ್ದರು. 2014ರ ಚುನಾವಣೆಯಲ್ಲಿಯೂ ಮತ್ತೆ ಕಣಕ್ಕಿಳಿದು, ಜಯಭೇರಿ ಬಾರಿಸಿದ್ದರು. ಎರಡು ಅವಧಿಗಳಿಂದ ಸಂಸದರಾಗಿರುವ ಅವರು ಈಗ 3ನೇ ಬಾರಿಗೆ ಅವಕಾಶ ಪಡೆದಿದ್ದಾರೆ. ಸಂಸದರಾಗಿ ಹ್ಯಾಟ್ರಿಕ್‌ ಬಾರಿಸುವ ಲೆಕ್ಕಾಚಾರ ಹಾಗೂ ನಿರೀಕ್ಷೆಯಿಂದಿದ್ದಾರೆ.

ಪಕ್ಷದ ಹಿರಿಯರು, ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು, ವಿಶೇಷವಾಗಿ ಪ್ರಧಾನಿ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹತ್ತು ವರ್ಷಗಳಲ್ಲಿ ನಾನು ಮಾಡಿರುವ ಕೆಲಸ, ಸಾಧನೆಯನ್ನು ನೋಡಿ 3ನೇ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಇದು ಸಂತಸ ತಂದಿದೆ ಮತ್ತು ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ಜಿಲ್ಲೆಯ ಜನತೆಯ ಅಶೀರ್ವಾದದಿಂದ ಎರಡು ಬಾರಿ ಗೆದ್ದಿದ್ದೇನೆ. ಮೂರನೇ ಬಾರಿ ಅಶೀರ್ವಾದ ಪಡೆಲು ಜನರ ಬಳಿಗೆ ತೆರಳುತ್ತಿದ್ದೇನೆ.
– ನಳಿನ್‌ ಕುಮಾರ್‌ ಕಟೀಲು,  ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next