Advertisement

ದ.ಕ. ಜಿಲ್ಲೆ ಶಿಕ್ಷಣ ಕಾಶಿ: ಸಂಸದ ನಳಿನ್‌

11:14 AM Aug 16, 2018 | Team Udayavani |

ಮಹಾನಗರ : ದಕ್ಷಿಣ ಕನ್ನಡ ಜಿಲ್ಲೆಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಇದೆ. ದೇಶದಲ್ಲಿಯೇ ಜಿಲ್ಲೆಯನ್ನು ಶಿಕ್ಷಣ ಕಾಶಿ ಎನ್ನಬಹುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಸಂತ ಆ್ಯಗ್ನೆಸ್‌ ಕಾಲೇಜು ವತಿಯಿಂದ ಬುಧವಾರ ಆಯೋಜಿಸಲಾದ ಮೇರಿ ಎಲ್ವೀಷಿಯಾ ಶತಾಬ್ದ ಸ್ಮಾರಕ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಅನುದಾನದ ಭರವಸೆ
ಆ್ಯಗ್ನೆಸ್‌ ಕಾಲೇಜು ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದೆ. ಚರ್ಚ್‌, ಮಿಷನರಿಗಳು ಆರೋಗ್ಯ, ಶಿಕ್ಷಣ ಸಹಿತ ಹಲವಾರು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸ್ಮಾರಕ ಕಟ್ಟಡ ನಿರ್ಮಾಣಕ್ಕೆ ಎಂಆರ್‌ಪಿಎಲ್‌ನಂತಹ ಸಂಸ್ಥೆಗಳಿಂದ ಸಿಎಸ್‌ಆರ್‌ ಫಂಡ್‌ನಿಂದ 10 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಶೈಕ್ಷಣಿಕ ಕ್ರಾಂತಿಗೆ ಮಿಷನರಿಗಳು ಕಾರಣ
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯಾಗಲು ಮಿಷನರಿಗಳು ಕಾರಣ. 24 ಮಂದಿ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಆ್ಯಗ್ನೆಸ್‌ ಕಾಲೇಜಿನಲ್ಲಿ ಸದ್ಯ 4,500ಕ್ಕೂ ಮಿಕ್ಕು ವಿದ್ಯಾರ್ಥಿಗಳಿದ್ದಾರೆ ಎಂದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಆ್ಯಗ್ನೆಸ್‌ ಕಾಲೇಜು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿ ಎಂದು ತಿಳಿಸಿದರು.

ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ಎನ್‌. ವಿನಯ ಹೆಗ್ಡೆ, ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್‌. ಲೋಬೋ, ಕಾರ್ಪೊರೇಟರ್‌ ಗಳಾದ ನವೀನ್‌ ಆರ್‌. ಡಿ’ಸೋಜಾ, ಸಬಿತಾ ಮಿಸ್ಕಿತ್‌, ಉದ್ಯಮಿ ಮೈಕಲ್‌ ಡಿ’ಸೋಜಾ, ಮುಂಬಯಿಯ ಆಲ್ಡೆಲ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ, ಆದಾಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್‌ ನಜೀರಾ ಮಹಮ್ಮದ್‌, ಮಾಜಿ ಸಿವಿಲ್‌ ನ್ಯಾಯಾಧೀಶರಾದ ವಿಜೇತ ಪಿಂಕಿ ಡೆ`ಸಾ, ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ಶತಮಾನೋತ್ಸವ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ಡಾ| ಮೀರಾ ಆರಾನ್ಹಾ, ಆ್ಯಗ್ನೆಸ್‌ ಕಾಲೇಜು ಪ್ರಾಂಶುಪಾಲೆ ಸಿ| ಡಾ| ಎಂ. ಜೆಸ್ವೀನಾ, ಜಂಟಿ ಕಾರ್ಯದರ್ಶಿ ಡಾ| ಮರಿಯಾ ರೂಪಾ ಮೊದಲಾದವರು ಉಪಸ್ಥಿತರಿದ್ದರು.

ಮೌಲ್ಯಾಧಾರಿತ ಶಿಕ್ಷಣ
ಮಂಗಳೂರು ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವ ಸಮಯದಲ್ಲಿ ದೇವರನ್ನು ನಂಬಿದರೆ ಅಂದುಕೊಂಡ ಕೆಲಸ ನೆರವೇರುತ್ತದೆ. ಆ್ಯಗ್ನೆಸ್‌ ಕಾಲೇಜು 100 ವರ್ಷಕ್ಕೆ ಕಾಲಿಟ್ಟಿದ್ದು, ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next