Advertisement
ಈ ಹಿನ್ನೆಲೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ವಿಚಾರ ಕಗ್ಗಂಟಾಗಿ ಪರಿಣಮಿಸಿರುವುದರಿಂದ ಎಲ್ಲ ಆಕಾಂಕ್ಷಿಗಳ ಜತೆಗೆ ಜಿಲ್ಲೆಯ ಪ್ರಮುಖ ಹಾಲಿ-ಮಾಜಿ ನಾಯಕರಿಗೆ ತುರ್ತಾಗಿ ಹೊಸದಿಲ್ಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರು ಹಾಗೂ ಎಲ್ಲ ಟಿಕೆಟ್ ಆಕಾಂಕ್ಷಿಗಳು ತುರ್ತಾಗಿ ಗುರುವಾರ ಹೊಸದಿಲ್ಲಿಗೆ ತೆರಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಗುರುವಾರ ಸಂಜೆ 6 ಗಂಟೆಗೆ ಹೊಸದಿಲ್ಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಹಾಗೂ ಪ್ರಮುಖರಾದ ವಿಷ್ಣುನಾಥನ್ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಚಿವ ಯು.ಟಿ. ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಮಾಜಿ ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರ ಅಭಿಪ್ರಾಯ ಪಡೆದ ಬಳಿಕ ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ಆ ಮೂಲಕ ಅಭ್ಯರ್ಥಿ ಆಯ್ಕೆ ಅಂತಿಮವಾದ ಬಳಿಕ ಉದ್ಭವಿಸಬಹುದಾದ ಬಂಡಾಯವನ್ನು ಮೊದಲೇ ಶಮಗೊಳಿಸುವ ಪ್ರಯತ್ನಕ್ಕೆ ಹೈಕಮಾಂಡ್ ಮುಂದಾಗಿರುವುದು ಗಮನಾರ್ಹ. ಬಿಜೆಪಿಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಮೂರನೇ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವುದು ಬಹುತೇಕ ಖಚಿತಗೊಂಡಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
Related Articles
Advertisement
ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಗಿರುವುದರಿಂದಾಗಿ ದ.ಕ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರಾಗಿದ್ದು, ಕೊನೆಯ ಗಳಿಗೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರ ಯಾರ ಪಾಲಾಗುತ್ತದೆ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿರುವುದು ವಿಶೇಷ.
ಯಾರೆಲ್ಲ ಆಕಾಂಕ್ಷಿಗಳು?ದ.ಕ. ಕಾಂಗ್ರೆಸ್‌ನ ಟಿಕೆಟ್ ಪಡೆಯುವುದಕ್ಕೆ ಪ್ರಬಲ ಆಕಾಂಕ್ಷಿಗಳಾಗಿ ಸಹಕಾರಿ ಧುರೀಣ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಯುವ ನಾಯಕ ಮಿಥುನ್ ರೈ, ಉದ್ಯಮಿ ಯು.ಕೆ. ಮೋನು ಸಹಿತ ಇನ್ನೂ ಹಲವರು ರೇಸ್‌ನಲ್ಲಿ ಇದ್ದಾರೆ. ರಾಜೇಂದ್ರ ಕುಮಾರ್, ರೈ, ಐವನ್, ಸೊರಕೆ, ಮಿಥುನ್ ಹಾಗೂ ಮೋನು ಅವರಿಗೂ ಹೊಸದಿಲ್ಲಿಗೆ ಬರುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.