Advertisement

ದ.ಕ.: ಬಸ್‌ ಸಂಚಾರ ಇನ್ನೂ ಅನಿಶ್ಚಿತ

01:56 AM May 18, 2020 | Sriram |

ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ ಎರಡು ದಿನಗಳವರೆಗೆ ಯಥಾ ಪ್ರಕಾರ ಮುಂದುವರಿಯಲಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಬಸ್‌ ಸಂಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

Advertisement

“ಸೆಪ್ಟಂಬರ್‌ ವರೆಗೆ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ “ಉದಯವಾಣಿ’ಗೆ ಮಾಹಿತಿ ನೀಡಿರುವ ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಅವರು, “ನಮ್ಮ ಒಕ್ಕೂಟದಿಂದ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ. ಬಸ್‌ ಸಂಚಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ.

“ರಾಜ್ಯ ಸರಕಾರ ನಿರ್ದೇಶನ ಬಿಡುಗಡೆ ಮಾಡಿದ ಬಳಿಕ ಬಸ್‌ ಓಡಾಟಕ್ಕೆ ಯಾವೆಲ್ಲಾ ಪ್ರದೇಶಗಳಿಗೆ ಅನುಮತಿ ಸಿಗುತ್ತದೆ ಎಂದು ಪರಿಶೀಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರಿಗೆ ಅವಕಾಶ ನೀಡಬೇಕು. ಹೀಗಿರುವಾಗ ಈ ಹಿಂದಿನ ಟಿಕೆಟ್‌ ದರದಲ್ಲಿ ಕಾರ್ಯಾಚರಣೆ ಕಷ್ಟ. ಒಂದೂವರೆ ಪಟ್ಟು ಏರಿಕೆ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇವೆ. ಈ ಬಗ್ಗೆ ಸರಕಾರ ಅಧಿಸೂಚನೆ ಹೊರಡಿಸಿದರೆ ನಿರ್ದೇಶನ ಬಂದ ಕೂಡಲೇ ಬಸ್‌ ಕಾರ್ಯಾರಂಭಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

ಖಾಸಗಿ ಬಸ್‌ಗಳಿಗೆ ರಾಜ್ಯ ಸರಕಾರ ರಸ್ತೆ ತೆರಿಗೆ ಪಾವತಿಯ ದಿನಾಂಕ ವಿಸ್ತರಣೆ ಮಾಡಿದೆ ವಿನಃ ರಸ್ತೆ ತೆರಿಗೆಗೆ ವಿನಾಯಿತಿ ನೀಡಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯ ಹೆಚ್ಚಿನ ಖಾಸಗಿ ಮತ್ತು ಸಿಟಿ ಬಸ್‌ಗಳನ್ನು ಆರ್‌ಟಿಒಕ್ಕೆ ಹಸ್ತಾಂತರ (ಸರಂಡರ್‌) ಮಾಡಲಾಗಿದೆ. ಇದರಿಂದಾಗಿ ರಸ್ತೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಒಂದು ವೇಳೆ ಮೇ ತಿಂಗಳಲ್ಲಿ ಲಾಕ್‌ಡೌನ್‌ ಸಡಿಲಿಕೆಯಾಗಿ ಬಸ್‌ ಸಂಚಾರಕ್ಕೆ ಅವಕಾಶ ಸಿಕ್ಕರೂ ಜೂನ್‌ನಲ್ಲಿಯೇ ಬಸ್‌ ಆರಂಭಿಸಲು ಕೆಲವು ಮಾಲಕರು ನಿರ್ಧರಿಸಿದ್ದಾರೆ. ಇಲ್ಲದಿದ್ದರೆ ಮೇ ತಿಂಗಳ ಪೂರ್ಣ ರಸ್ತೆ ತೆರಿಗೆಯನ್ನು ಭರಿಸಬೇಕಾಗುತ್ತದೆ.

ಕೆಎಸ್ಸಾರ್ಟಿಸಿ ಓಡಾಟ ನಿರ್ಧಾರವಾಗಿಲ್ಲ
“ದ.ಕ. ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ಓಡಾಟ ಇನ್ನೂ ನಿರ್ಧಾರವಾಗಿಲ್ಲ. ಒಂದು ವೇಳೆ ಲಾಕ್‌ಡೌನ್‌ ರದ್ದಾದರೆ ಹಂತ ಹಂತವಾಗಿ ಬಸ್‌ ಓಡಿಸಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್‌ ಪೂರ್ಣಗೊಳ್ಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜನರು ನಿಲ್ಲುವಲ್ಲಿ ಮಾರ್ಕಿಂಗ್‌ ವ್ಯವಸ್ಥೆಯನ್ನು ರವಿವಾರ ಮಾಡಲಾಗಿತ್ತು.

Advertisement

ಸಾವಿರಕ್ಕೂ ಅಧಿಕ ಬಸ್‌
ದ.ಕ. ಜಿಲ್ಲೆಯಲ್ಲಿ ದಿನಂಪ್ರತಿ ಸಾವಿರಕ್ಕೂ ಮಿಕ್ಕಿ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಜಿಲ್ಲೆಯಲ್ಲಿ ಸಾವಿರದಷ್ಟು ಸರಕಾರಿ ಬಸ್‌ಗಳೂ ಇವೆ. ಮಂಗಳೂರು ನಗರದಲ್ಲಿ 360 ಸಿಟಿ ಬಸ್‌ಗಳು, 700 ಸರ್ವಿಸ್‌ ಬಸ್‌ಗಳು, 70ರಷ್ಟು ಒಪ್ಪಂದದ ಮೇರೆಗಿನ ಬಸ್‌ಗಳು ಮತ್ತು 150ಕ್ಕೂ ಮಿಕ್ಕಿ ಟೂರಿಸ್ಟ್‌ ಬಸ್‌ಗಳು ಸಂಚರಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next