Advertisement

ದ.ಕ.: ಮೂರು ವರ್ಷಗಳಲ್ಲಿ 74,924 ಮಂದಿಗೆ “ತಾಯಿ ಕಾರ್ಡ್‌’

11:09 AM Oct 11, 2019 | mahesh |

ಮಹಾನಗರ: ಹುಟ್ಟುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಗರ್ಭಿಣಿಯಾಗಿರುವಾಗಲೇ ತಾಯಿ ಕಾರ್ಡ್‌ ಮಾಡಿಸಿಕೊಳ್ಳುವುದು ಅವಶ್ಯ. ತಾಯಿ ಕಾರ್ಡ್‌ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಿಬಂದಿ ಮನೆ ಮನೆ ಭೇಟಿ ಮಾಡಿ ಜಾಗೃತಿ ಮೂಡಿಸಿದ ಪರಿಣಾಮ ದ.ಕ. ಜಿಲ್ಲೆಯಲ್ಲಿ ತಾಯಿ ಕಾರ್ಡ್‌ ನೋಂದಣಿಯಲ್ಲಿ ಉತ್ತಮ ಬೆಳವಣಿಗೆಯಾಗಿದೆ.

Advertisement

ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 74,924 ಮಂದಿ ತಾಯಿ ಕಾರ್ಡ್‌ ಸೌಲಭ್ಯ ಪಡೆದುಕೊಂಡಿದ್ದು, ಶೇ. 100ರಷ್ಟು ತಾಯಿ ಕಾರ್ಡ್‌ಗಳನ್ನು ಗರ್ಭಿಣಿಯರಿಗೆ ಮುಟ್ಟಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಮುಂದೆಯೂ ಈ ಸಾಧನೆ ಯಥಾಪ್ರಕಾರ ಸಾಗಲಿದೆ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.

13,908 ತಾಯಿ ಕಾರ್ಡ್‌
ತಾಯಿ ಕಾರ್ಡ್‌ಗಾಗಿ 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 30,664 ಮಂದಿ, 2018-19ರಲ್ಲಿ 30,352 ಮಂದಿ, 2019-20ನೇ ಸಾಲಿನಲ್ಲಿ ಇಲ್ಲಿವರೆಗೆ 13,908 ಮಂದಿ ಗರ್ಭಿಣಿ ಯರ ದಾಖಲಾತಿಯಾಗಿದ್ದು, ಐದು ತಿಂಗಳು ಮೇಲ್ಪಟ್ಟ ಎಲ್ಲರಿಗೂ ತಾಯಿ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ದಾಖಲಾತಿ ಮಾಡಿಕೊಂಡ ಬಳಿಕ ಅವರು ತಾಯಿ ಕಾರ್ಡ್‌ ಪಡೆಯಲು ಅರ್ಹತೆ ಪಡೆಯುತ್ತಾರೆ. ಕೆಲವರು ತಾವಾಗಿಯೇ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಮಾಹಿತಿ ಪಡೆದುಕೊಂಡು ದಾಖಲಾತಿ ಮಾಡಿಕೊಂಡರೆ, ಬಹುತೇಕ ಕಡೆಗಳಲ್ಲಿ ಮನೆಗಳಲ್ಲಿ ಗರ್ಭಿಣಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರೇ ಮನೆಗೆ ತೆರಳಿ ತಾಯಿ ಕಾರ್ಡ್‌ ಮಾಡಿಸುವಂತೆ ಹೇಳುತ್ತಾರೆ. ತಾಯಿ ಕಾರ್ಡ್‌ ವಿತರಣೆಯಲ್ಲಿ ಜಿಲ್ಲೆಯಲ್ಲಿ ಶೇ. 100 ಸಾಧನೆ ಆಗಿದ್ದರೂ ನಿರ್ಲಕ್ಷದ ಕಾರಣದಿಂದಾಗಿ ಕೆಲವು ಮಂದಿ ತಾಯಿ ಕಾರ್ಡ್‌ ಮಾಡಲು ಹಿಂದೇಟು ಹಾಕುತ್ತಾರೆ.

ತಾಯಿ ಕಾರ್ಡ್‌ ಮಾಡಿಸಲು ಬಿಪಿಎಲ್‌, ಎಪಿಎಲ್‌ ಎಂಬ ಮಾನದಂಡ ಇರುವುದಿಲ್ಲ. ಆದಾಗ್ಯೂ ಕೆಲವರು ತಮಗೆ ಅದರ ಅಗತ್ಯವಿಲ್ಲ ಎಂಬುದಾಗಿ ನಿರ್ಲಕ್ಷ ತೋರುತ್ತಾರೆ. ಅವರ ಮನವೊಲಿಸಿ ಕಾರ್ಡ್‌ನ ಪ್ರಯೋಜನಗಳ ಬಗ್ಗೆ ತಿಳಿಸಿ ಕಾರ್ಡ್‌ ಮಾಡಿಸುವಂತೆ ಹೇಳಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

Advertisement

ದ.ಕ. ಜಿಲ್ಲೆಯಲ್ಲಿ 2017-19ರ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 30-35 ಸಾವಿರ ಹೆರಿಗೆಯಾಗಿದೆ. ಈ ಪೈಕಿ ಸುಮಾರು ಶೇ. 5ರಷ್ಟು ಹೊರ ಜಿಲ್ಲೆಯವರಾದರೆ, ಉಳಿದವರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿ ರುತ್ತಾರೆ. ಅವರೆಲ್ಲರಿಗೂ ಗರ್ಭಿಣಿ ಯಾಗಿರುವಾಗಲೇ ತಾಯಿ ಕಾರ್ಡ್‌ ದಾಖಲಾತಿ ಮಾಡಿಸಲಾಗುತ್ತದೆ. ಹೊರ ಜಿಲ್ಲೆಯವರನ್ನು ಇಲ್ಲಿ ತಾಯಿ ಕಾರ್ಡ್‌ಗೆ ದಾಖಲಾತಿ ಮಾಡಿಕೊಳ್ಳಲಾಗುವುದಿಲ್ಲ. ಹಾಗಾಗಿ ಹೆರಿಗೆಯಾದ ಒಟ್ಟು ಸಂಖ್ಯೆಯನ್ನು ತಾಯಿ ಕಾರ್ಡ್‌ಗೆ ತಾಳೆ ಹಾಕಲು ಬರುವುದಿಲ್ಲ.

ಸರಕಾರಿ ಯೋಜನೆ ಪ್ರಯೋಜನ
ತಾಯಿ, ಮಗುವಿನ ಆರೈಕೆಯ ನಿಟ್ಟಿನಲ್ಲಿ ಸರಕಾರ ರಾಷ್ಟ್ರೀಯ ಸಮಗ್ರ ಗ್ರಾಮೀಣ ಆರೋಗ್ಯ ಅಭಿಯಾನ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಂಗವಾಗಿ ತಾಯಿ ಕಾರ್ಡ್‌ನ್ನು ಜಾರಿಗೊ ಳಿಸಿದೆ. ಮಹಿಳೆ ಗರ್ಭವತಿಯಾಗಿ ಮೂರು ತಿಂಗಳು ತುಂಬುವ ವೇಳೆ ಇದನ್ನು ಮಾಡಿಸಿಕೊಂಡರೆ ಉಪಯುಕ್ತ ಎಂಬುದಾಗಿ ನಿಯಮ ಹೇಳುತ್ತದೆ. ತಾಯಿ, ಮಗುವಿನ ಸಂಪೂರ್ಣ ಆರೋಗ್ಯ ಮಾಹಿತಿ ತಾಯಿ ಕಾರ್ಡ್‌ ನಲ್ಲಿರುತ್ತದೆ. ಗರ್ಭಿಣಿ ಆದ ಅನಂತರದಿಂದ ಮಗುವಿಗೆ 5 ವರ್ಷ ತುಂಬುವ ತನಕ ಈ ತಾಯಿ ಕಾರ್ಡ್‌ ಅಗತ್ಯವಾಗಿ ಬೇಕಾಗುತ್ತದೆ. ಜನನಿ ಸುರಕ್ಷಾ ಯೋಜನೆ, ಮಡಿಲು ಯೋಜನೆ, ಪ್ರಸೂತಿ ಆರೈಕೆ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ತಾಯಿ ಕಾರ್ಡ್‌ ಅಗತ್ಯವಾಗಿರುತ್ತದೆ. ಹುಟ್ಟಿದ ಬಳಿಕ ಮಗುವಿಗೆ ವಿಟಮಿನ್‌, ಕಬ್ಬಿಣಾಂಶ ಮಾತ್ರೆ, ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವಂತಾಗಲು ತಾಯಿ ಕಾರ್ಡ್‌ ಅವಶ್ಯ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಮಗುವಿನ ಸಮಗ್ರ ಆರೋಗ್ಯ
ತಾಯಿ ಕಾರ್ಡ್‌ ದಾಖಲಾತಿಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 100 ಸಾಧನೆಯಾಗಿದೆ, ಮುಂದೆಯೂ ಆಗಲಿದೆ. ಆರೋಗ್ಯ ಇಲಾಖೆ ಸಿಬಂದಿಗಳು ಅತೀ ಗ್ರಾಮ್ಯ ಭಾಗಗಳಿಗೂ ತೆರಳಿ ಕಾರ್ಡ್‌ ಮಾಡುವಂತೆ ಗರ್ಭಿಣಿಯರನ್ನು ಪ್ರೇರೇಪಿಸುತ್ತಾರೆ. ಮುಂದೆಯೂ ಕೂಡ ಪ್ರತಿಯೋರ್ವ ಗರ್ಭಿಣಿ ಯೂ ತಾಯಿ ಕಾರ್ಡ್‌ ಮಾಡಿಸಿ ಕೊಳ್ಳಲು ಮುಂದಾ ಗಬೇಕು. ಮಗುವಿನ ಸಮಗ್ರ ಆರೋಗ್ಯದ ದೃಷ್ಟಿಯಿಂದ ಇದು ತೀರಾ ಅಗತ್ಯ.
– ಡಾ| ರಾಜೇಶ್‌, ಆರ್‌ಸಿಎಚ್‌ ಅಧಿಕಾರಿ

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next