Advertisement

ದ.ಕ.: 300 ಕೋ.ರೂ. ಮೀರಲಿದೆ ನಷ್ಟ

02:03 AM Aug 14, 2019 | sudhir |

ಮಂಗಳೂರು: ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ 300 ಕೋ.ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಇದು ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಅಧಿಕ ಎನ್ನಲಾಗಿದೆ. ಬೆಳ್ತಂಗಡಿ-ಬಂಟ್ವಾಳದಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಸದ್ಯ ಜಿಲ್ಲಾಡಳಿತವು ವಿವಿಧ ಇಲಾಖೆಗಳಿಂದ ನಷ್ಟದ ವರದಿ ಸಿದ್ಧಪಡಿಸುತ್ತಿದೆ.

Advertisement

ಅದರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 275 ಕೋ.ರೂ.ಗಳಷ್ಟು (ಕೃಷಿನಾಶ ಬಿಟ್ಟು) ನಷ್ಟ ಸಂಭವಿಸಿದೆ. ಅಂತಿಮ ನಷ್ಟದ ಅಂದಾಜು ಇನ್ನಷ್ಟೇ ಸಿಗಬೇಕಿದೆ. ಕಳೆದ ವರ್ಷ ಮಳೆಗೆ 238 ಕೋ.ರೂ.ಗಳಷ್ಟು ನಷ್ಟ ಸಂಭವಿಸಿತ್ತು.
ಸದ್ಯದ ಮಾಹಿತಿ ಪ್ರಕಾರ, ಮಂಗಳೂರು ತಾಲೂಕಿನಲ್ಲಿ 96.02 ಕೋ.ರೂ., ಬಂಟ್ವಾಳದಲ್ಲಿ 31.68 ಕೋ.ರೂ., ಬೆಳ್ತಂಗಡಿಯಲ್ಲಿ 74.47 ಕೋ.ರೂ., ಪುತ್ತೂರು 44.67 ಕೋ.ರೂ. ಹಾಗೂ ಸುಳ್ಯ 27.79 ಕೋ.ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದು, 142 ಕೋ.ರೂ.ಗೂ ಅಧಿಕ ನಷ್ಟ (ಬೆಳ್ತಂಗಡಿ 52 ಕೋ.ರೂ.) ಆಗಿದೆ. ಗ್ರಾಮೀಣ ರಸ್ತೆಗಳ ಹಾನಿಯಿಂದಾಗಿ 65 ಕೋ.ರೂ. (ಮಂಗಳೂರು ತಾ.19 ಕೋ.ರೂ.), ರಾಷ್ಟ್ರೀಯ ಹೆದ್ದಾರಿಯ ಹಾನಿಯಿಂದಾಗಿ ಒಟ್ಟು 15 ಕೋ.ರೂ (ಪುತ್ತೂರು: 7 ಕೋ.ರೂ.), ಮೆಸ್ಕಾಂಗೆ ಸುಮಾರು 10 ಕೋ.ರೂ., ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 45 ಕೋ.ರೂ (ಮಂಗಳೂರು-40 ಕೋ.ರೂ.) ನಷ್ಟವಾಗಿದೆ. ಜಿಲ್ಲೆಯಲ್ಲಿ 325 ಪಕ್ಕಾ ಮನೆ ಮತ್ತು 220ಕಚ್ಚಾ ಮನೆಗಳಿಗೆ ಹಾನಿಯಾಗಿದೆ.

ಮಂಗಳೂರಿನಲ್ಲೇ ಅಧಿಕ ನಷ್ಟ!
ಬೆಳ್ತಂಗಡಿಯಲ್ಲಿ ನಿರೀಕ್ಷೆಗೂ ಮೀರಿ ಕಷ್ಟನಷ್ಟಗಳು ಸಂಭವಿಸಿವೆ. ಆದರೂ ಅಧಿಕ ನಷ್ಟ ಆಗಿರುವುದು ಮಂಗಳೂರು ತಾಲೂಕಿನಲ್ಲಿ. ಮಂಗಳೂರು ತಾ.ಪಂ, ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಮೂಲ್ಕಿ ಪುರಸಭೆ, ಕೋಟೆಕಾರು ಪ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳು ಅಧಿಕವಿರುವ ಕಾರಣ ಇಲ್ಲಿ ನಷ್ಟ ಪ್ರಮಾಣ ಅಧಿಕ. ಮಂಗಳೂರು ತಾಲೂಕಿನಲ್ಲಿ 96.02 ಕೋ.ರೂ. ನಷ್ಟ ಸಂಭವಿಸಿದ್ದರೆ, ಬೆಳ್ತಂಗಡಿಯಲ್ಲಿ 74.47 ಕೋ.ರೂ. ನಷ್ಟ ಸಂಭವಿಸಿದೆ.

ಭತ್ತ-ಅಡಿಕೆ ನಾಶ ದುಪ್ಪಟ್ಟು
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭತ್ತ, ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ 793 ಹೆಕ್ಟೇರ್‌ ಭತ್ತ ಬೆಳೆ ನಾಶವಾಗಿದೆ. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಸುಮಾರು 4,200 ಹೆಕ್ಟೇರ್‌ ಅಡಿಕೆ-ತೆಂಗು, ಬಾಳೆ ಕೃಷಿಗೆ ಹಾನಿಯಾಗಿದ್ದು, 19 ಕೋ.ರೂ. ನಷ್ಟ ಅಂದಾಜಿಸಲಾಗಿದೆ.

Advertisement

ಕೆಲವೇ ದಿನಗಳಲ್ಲಿ ಕೇಂದ್ರದ ತಂಡ
ಬೆಳ್ತಂಗಡಿ-ಚಾರ್ಮಾಡಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಭ ವಿಸಿರುವ ನಷ್ಟದ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಲು ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ತಂಡ ಕೆಲವೇ ದಿನಗಳಲ್ಲಿ ಕರಾವಳಿಗೆ ಆಗಮಿಸಲಿದೆ. ಕೇಂದ್ರ ಸರಕಾರದಿಂದ ನಿಯೋಜನೆಗೊಂಡ ಹಿರಿಯ ಅಧಿಕಾರಿಗಳು ತಂಡದಲ್ಲಿ ಇರುತ್ತಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯದ ಲೆಕ್ಕಾಚಾರ ಪ್ರಕಾರ ಸುಮಾರು 275 ಕೋ.ರೂ. ನಷ್ಟ ಸಂಭವಿಸಿದೆ. ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಎಲ್ಲ ಇಲಾಖೆಗಳಿಂದ ಈ ಕುರಿತಾದ ಮಾಹಿತಿಗಳನ್ನು ಪಡೆಯಲಾಗುತ್ತಿದೆ.
– ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next