Advertisement

ದ.ಕ.: 10,187 ಬ್ಯಾನರ್‌, ಬಂಟಿಂಗ್‌ ತೆರವು

12:30 AM Mar 15, 2019 | Team Udayavani |

ಮಂಗಳೂರು: ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮಾ. 13ರ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿದ್ದ 10,187 ಬ್ಯಾನರ್‌, ಪೋಸ್ಟರ್‌, ಬಂಟಿಂಗ್‌ ಹಾಗೂ ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು. 

Advertisement

ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿದ್ದ 1,901 ಪೋಸ್ಟರ್‌ಗಳು, 4,376 ಬ್ಯಾನರ್‌, 10 ಗೋಡೆ ಬರಹಗಳು ಹಾಗೂ ಇತರ 3,900 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ದ್ದ 156 ಪೋಸ್ಟರ್‌ಗಳು, 65 ಬ್ಯಾನರ್‌ಗಳುಹಾಗೂ ಇತರ 487 ಸೇರಿದಂತೆ ಒಟ್ಟು 708 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸ ಲಾಗಿದೆ ಎಂದು ವಿವರಿಸಿದರು.

ಲಿಖೀತ ಅನುಮತಿ ಅಗತ್ಯ
ಪಕ್ಷ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕೆ ನಡೆಸುವ ಸಭೆ, ಮೆರವಣಿಗೆ ಮತ್ತು ಧ್ವನಿವರ್ಧಕಗಳಿಗೆ ಪೊಲೀಸರಿಂದ ಲಿಖೀತ ಅನುಮತಿ ಪಡೆದು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯ ವರೆಗೆ ಬಳಸಬಹುದು. ಬಳಸುವ ಕಟ್ಟಡ, ಮೈದಾನದ ಬಗ್ಗೆಯೂ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು. 

ಧಾರ್ಮಿಕ ಇಲಾಖೆಗೆ ಸೇರಿದ ಕಟ್ಟಡ ಅಥವಾ ಮೈದಾನಗಳನ್ನು ಪ್ರಚಾರಕ್ಕೆ ಬಳಸುವಂತಿಲ್ಲ. ಎ.16ರ ಬೆಳಗ್ಗೆ 7ರಿಂದ ಧ್ವನಿವರ್ಧಕ ಗಳ ಬಳಕೆ ಮತ್ತು ಪ್ರಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. 

ರಾಜಕೀಯೇತರ ಸಭೆ, ಸಮಾರಂಭಗಳಿಗೆ ನಿಯಂತ್ರಣ ಇಲ್ಲವಾದರೂ ಸಹಾಯಕ ಚುನಾವಣ ಅಧಿಕಾರಿಯಿಂದ ಲಿಖೀತ ಅನುಮತಿ ಪಡೆಯಬೇಕು. ಪ್ರಚಾರಕ್ಕಾಗಿ ಬಳಸುವ ವಾಹನಗಳ ಕುರಿತು ಲಿಖೀತ ಅನುಮತಿ ಪಡೆದು ವಾಹನದಲ್ಲಿ ಪ್ರದರ್ಶಿಸಿ ಬಳಸಬಹುದು ಎಂದರು. 

Advertisement

ಮಾ.16ರ ವರೆಗೆ ನೋಂದಣಿ
ಚುನಾವಣ ಆಯೋಗದ ನಿರ್ದೇಶನ ದಂತೆ 2019ರ ಜ.1ಕ್ಕೆ 18 ವರ್ಷ ತುಂಬಿರುವ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೆ ಇರುವ ಸಾರ್ವಜನಿಕರು ತಮ್ಮ ಹೆಸರನ್ನು ನೋಂದಾಯಿಸಲು ಮಾ. 16ರ ವರೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಉಚಿತ ದೂರವಾಣಿ ಸಂಖ್ಯೆ 1950ರ ನೆರವು ಪಡೆಯಬಹುದು.  nvsp.in ಮೂಲಕ ಆನ್‌ಲೈನ್‌ ಮನವಿಯನ್ನೂ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

325 ಲೀಟರ್‌ ಮದ್ಯ ವಶ
ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆ ಯಲ್ಲಿ ಈವರೆಗೆ ಒಟ್ಟು 1.15 ಲಕ್ಷ ರೂ. ಮೌಲ್ಯದ 325 ಲೀ. ಅಕ್ರಮ ಮದ್ಯ ಹಾಗೂ ಒಂದು ಸ್ಕೂಟರ್‌ ವಶಪಡಿಸಿಕೊಳ್ಳಲಾಗಿದೆ. ಸಿವಿಜಿಲ್‌ ಆ್ಯಪ್‌ನಡಿ 5 ದೂರುಗಳು ದಾಖ ಲಾಗಿದ್ದು, ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 52 ಪ್ರಕರಣಗಳನ್ನು ದಾಖಲಿಸಲಾಗಿದೆ. 10,234 ಪರವಾನಿಗೆ ಪಡೆದ ಶಸ್ತ್ರಗಳಿದ್ದು, ಶೇ.30ರಷ್ಟನ್ನು ಇಲಾಖೆಯ ಸುಪರ್ದಿಗೆ ಪಡೆಯ ಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ನಾಮಪತ್ರ ಸಲ್ಲಿಕೆ ವೇಳೆ 5 ಮಂದಿಗೆ ಅವಕಾಶ
ಮಾ. 19ರಿಂದ 26ರ ವರೆಗೆ (ರಜಾ ದಿನಹೊರತುಪಡಿಸಿ) ಬೆಳಗ್ಗೆ 11ರಿಂದ 3 ಗಂಟೆ ವರೆಗೆ ನಾಮ ಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯ 3ನೇ ಮಹಡಿಯಲ್ಲಿರುವ ಕೋರ್ಟ್‌ ಹಾಲ್‌ನಲ್ಲಿ ಸಲ್ಲಿಸಬಹುದು. ಈ ವೇಳೆ ಅಭ್ಯರ್ಥಿ ಅಥವಾ ಸೂಚಕರು ಸೇರಿ ಐವರು ಇರಬಹುದು. 25,000 ರೂ. ಠೇವಣಿ ನಗದಾಗಿ ಪಾವತಿಸಬೇಕು. ಅಭ್ಯರ್ಥಿ ಅನುಸೂಚಿತ ಜಾತಿ/ಪಂಗಡದವ ರಾಗಿದ್ದರೆ ಜಾತಿ ಪ್ರಮಾಣಪತ್ರ ಹಾಜರುಪಡಿಸಿದಲ್ಲಿ, 12,500 ಠೇವಣಿ ಪಾವತಿಸಬಹುದಾಗಿದೆ. ನಾಮಪತ್ರವನ್ನು ಚುನಾವಣಾಧಿ ಕಾರಿಯಾದ ಜಿಲ್ಲಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯಾದ ಅಪರ ಜಿಲ್ಲಾಧಿ ಕಾರಿಗೆ ಸಲ್ಲಿಸಬಹುದು ಎಂದು ತಿಳಿಸಿದರು. 

ಸಂಸದ ನಳಿನ್‌ ಕುಮಾರ್‌ ಅವರ ಟ್ವಿಟರ್‌ ಹೇಳಿಕೆ ಬಗ್ಗೆ ದೂರು ಬಂದಿದ್ದು, ನೀತಿ ಸಂಹಿತೆ ಉಲ್ಲಂಘನೆ ಆಗಿದೆಯೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ಪ್ರಶ್ನೆಗೆ ಉತ್ತರಿಸಿದರು. ಎಸ್ಪಿ ಲಕ್ಷ್ಮೀಪ್ರಸಾದ್‌, ಜಿ.ಪಂ. ಸಿಇಒ ಡಾ| ಆರ್‌. ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು. 

ಆಭರಣ, ನಗದು ಒಯ್ಯುವಾಗ ದಾಖಲೆ ಅಗತ್ಯ 
ಸಾರ್ವಜನಿಕರು ಚಿನ್ನಾಭರಣ ಹಾಗೂ ನಗದನ್ನು ಸಾಗಿಸುವ ಸಂದರ್ಭ ಸಂಬಂಧಿಸಿದ ದಾಖಲೆ ಪತ್ರ ಇರಿಸಿಕೊಂಡಿರ ಬೇಕು. ಹಾಲ್‌ನೊಳಗೆ ನಡೆಯುವ ಮದುವೆಗಳಿಗೆ ಅನುಮತಿ ಬೇಕಾಗಿಲ್ಲ. ಆದರೆ ಚುನಾವಣಾಧಿಕಾರಿಗಳಿಗೆ ಆಮಂತ್ರಣ ಪತ್ರದೊಂದಿಗೆ ಮಾಹಿತಿ ನೀಡಿದರೆ ಉತ್ತಮ. ಹೊರಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ಅನುಮತಿ ಅಗತ್ಯ. ಯಕ್ಷಗಾನ ಸಹಿತ ಧಾರ್ಮಿಕ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಇಲ್ಲ. ಈ ಬಗ್ಗೆ ಚುನಾವಣಾಧಿಕಾರಿಯವರಿಗೆ ಮಾಹಿತಿ ನೀಡಿ ಅಲ್ಲಿ ಯಾವುದೇ ರೀತಿಯ ರಾಜಕೀಯ ಸಂಬಂಧಿ ಚಟುವಟಿಕೆಗಳು ನಡೆಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ನೀಡಬೇಕು ಎಂದು ಡಿಸಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next