Advertisement

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

11:20 PM Oct 19, 2020 | mahesh |

ಮಹಾನಗರ: ಪರಿಶಿಷ್ಟ ಜಾತಿ ಯುವಕ/ ಯುವತಿಯ ಅಂತರ್‌ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿ ಜಾತಿ ವ್ಯವಸ್ಥೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ವತಿಯಿಂದ ಜಾರಿಯಲ್ಲಿರುವ ಅಂತರ್‌ ಜಾತಿ ವಿವಾಹ ಪ್ರೋತ್ಸಾಹ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 101 ವಿವಾಹ ನಡೆದಿದ್ದು, ಒಟ್ಟು 1,48,24,000 ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದೆ.

Advertisement

ಜಾತಿ ವ್ಯವಸ್ಥೆ ನಿವಾರಣೆ ನಿಟ್ಟಿನಲ್ಲಿ ಅಂತರ್‌ಜಾತಿ ವಿವಾಹವನ್ನು ಪ್ರೋತ್ಸಾಹಿಸುವ ರಾಜ್ಯ ಸರಕಾರದ ಯೋಜನೆಯಂತೆ ಇತರ ಸವರ್ಣಿಯ ಜಾತಿಯ ಹೆಣ್ಣು ಪರಿಶಿಷ್ಟ ಜಾತಿಯ ಪುರುಷನನ್ನು ವಿವಾಹವಾದಲ್ಲಿ 2.50 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿಯ ಹೆಣ್ಣು ಇತರ ಸವರ್ಣಿಯ ಜಾತಿಯ ಪುರುಷನನ್ನು ವಿವಾಹವಾದಲ್ಲಿ 3 ಲಕ್ಷ ರೂ. ಪ್ರೋತ್ಸಾಹಧವನ್ನು ನೀಡಲಾಗುತ್ತದೆ. ಆದರೆ ದಂಪತಿಯ ಒಟ್ಟು ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರಬಾರದು.

ಮಾನದಂಡಗಳು
ಅಂತರ್‌ಜಾತಿ ವಿವಾಹ ನೋಂದಣಿಯಾಗಿರಬೇಕು. ಅರ್ಜಿಯ ಜತೆಗೆ ಹೆಣ್ಣು ಮತ್ತು ಗಂಡು ತಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಮದುವೆಯ ಫೋಟೋ ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ವಿವಾಹ ದಾಖಲೆ ಪತ್ರ, ಆಧಾರ್‌ಕಾರ್ಡ್‌ ವಿವರಗಳನ್ನು ಪ್ರತಿಗಳೊಂದಿಗೆ ನಮೂದಿಸಬೇಕು. ಮದುವೆಯಾಗಿ 1 ವರ್ಷದೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಪ್ರೋತ್ಸಾಹಧನ ದೊರೆಯುತ್ತದೆ.

ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ರವಾನೆಯಾಗುತ್ತದೆ. ತಾಲೂಕು ಸಮಾಜ ಕಲ್ಯಾಣಾಧಿಕಾರಿಯವರು ಅರ್ಜಿದಾರರ ಮನೆಗೆ ತೆರಳಿ ಅಂತರ್‌ಜಾತಿ ವಿವಾಹವಾಗಿರುವ ಬಗ್ಗೆ ದೃಢೀಕರಿಸಿ ವರದಿಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸುತ್ತಾರೆ. ಜಿಲ್ಲಾ ಕಚೇರಿ ಇದನ್ನು ಪರಿಶೀಲಿಸಿ ಪ್ರೋತ್ಸಾಹಧನ ಮಂಜೂರು ಮಾಡುತ್ತದೆ. ಪ್ರೋತ್ಸಾಹಧನ ದಂಪತಿಯ ಜಂಟಿ ಖಾತೆಗೆ ಜಮೆಯಾಗುವುದು. ಇದರಲ್ಲಿ ಅರ್ಧ ಮೊತ್ತವನ್ನು ರಾಷ್ಟ್ರೀಯ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಹಿಂದೆ ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತಿತ್ತು. ಪ್ರಸ್ತುತ ಒಂದೇ ಕಂತಿನಲ್ಲಿ ಹಣ ಜಮೆ ಮಾಡಲಾಗುತ್ತದೆ.

ತಾಲೂಕುಮಟ್ಟದಲ್ಲಿ ಪರಿಶೀಲನೆ
ಅಂತರ್‌ಜಾತಿ ವಿವಾಹ ಅರ್ಜಿಗಳು ಸಂಬಂಧಪಟ್ಟ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಹೋಗು ತ್ತವೆ. ಇಲಾಖೆಯ ತಾಲೂಕು ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ದೃಢೀಕರಿಸಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸುತ್ತಾರೆ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯವರು ಅದರ ಆಧಾರದಲ್ಲಿ ಪ್ರೋತ್ಸಾಹಧನ ಮಂಜೂರು ಮಾಡುತ್ತಾರೆ.
-ಯೋಗೀಶ್‌, ದ.ಕ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next