ಮೊಂಟೆ ಕಾರ್ಲೋ: ಮಾಜಿ ನಂ. 1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ಅವರು ಸೋಮವಾರ ನಡೆದ ಮೊಂಟೆ ಕಾರ್ಲೊ ಆರಂಭಿಕ ಪಂದ್ಯದಲ್ಲಿ ಸಹ ಆಟಗಾರ ದುಸಾನ್ ಲಾಜೋವಿಕ್ ವಿರುದ್ಧ ಜಯ ಸಾಧಿಸಿದ್ದಾರೆ.
ಆರಂಭದಿಂದಲೇ ಮೇಲುಗೈ ಸಾಧಿಸುತ್ತ ಸಾಗಿದ ಜೊಕೋವಿಕ್ ಒಂದು ಗಂಟೆಯೊಳಗೆ ಎದುರಾಳಿಯನ್ನು 6-0, 6-1 ನೇರ ಸೆಟ್‌ಗಳಿಂದ ಕೆಡವಿ ಮುನ್ನಡೆ ಸಾಧಿಸಿದರು.
ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುವುದರೊಂದಿಗೆ ಮತ್ತೆ ಫಾರ್ಮ್ಗೆ ಮರಳಿರುವುದನ್ನು ಖಚಿತಪಡಿಸಿರುವ 30ರ ಹರೆಯದ ಜೊಕೋವಿಕ್, ತನ್ನದೇ ದೇಶದ ಎದುರಾಳಿಗೆ ನೇರ ಸೆಟ್‌ಗಳ ಸೋಲುಣಿಸಿದರು.
ಟೆನಿಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದ ನೊವಾಕ್ ಮೊಣ ಕೈ ನೋವಿಗೆ ತುತ್ತಾದ ಬಳಿಕ 13ನೇ ಸ್ಥಾನಕ್ಕೆ ಕುಸಿದಿದ್ದರು. ಕಳೆದ ವರ್ಷ ಮೊಂಟೆ ಕಾರ್ಲೊ ಮಾಸ್ಟರ್ಗಾಗಿ ತರಬೇತಿ ಪಡೆದ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ತನ್ನ ಹಳೆಯ ಕೋಚ್ ಮರಿಯನ್ ವಾಜಾ ಅವರಲ್ಲಿ ತರಬೇತಿ ಪಡೆದಿರುವುದಲ್ಲದೆ ಸುಧಾರಿತ ಆಟಪ್ರದರ್ಶಿಸಿದ್ದಾರೆ.
“ನಾನು ಈ ಅಂಕಣದಲ್ಲಿ ತರಬೇತಿ ಪಡೆದಿದ್ದೇನೆ. ಹಾಗಾಗಿ ನನಗಿದು ಮನೆಯಂತೆ ಭಾಸವಾಗುತ್ತಿದೆ. ಗಾಯದ ಸಮಸ್ಯೆಯಿಂದಾಗಿ 12 ತಿಂಗಳು ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಗಾಯದ ಸಮಸ್ಯೆ ನನ್ನೆಲ್ಲ ಸೋಲಿಗೆ ಕಾರಣವಾಯಿತು’ ಎಂದು ಜೊಕೋವಿಕ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.
12 ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಜೊಕೋವಿಕ್ ಮುಂದಿನ ಪಂದ್ಯದಲ್ಲಿ ಬೋರ್ನ ಕೊರಿಕ್ ವಿರುದ್ಧ ಸೆಣಸಲಿದ್ದಾರೆ.