Advertisement

ಓಟ ಮುಂದುವರಿಸಿದ ಜೊಕೋವಿಕ್‌

11:08 PM Feb 12, 2021 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದ 5ನೇ ದಿನದಾಟದಲ್ಲಿ ಯಾವುದೇ ದೊಡ್ಡ ಮಟ್ಟದ ಏರುಪೇರು ಸಂಭವಿಸಿಲ್ಲ. ನೆಚ್ಚಿನ ಆಟಗಾರರಾದ ನೊವಾಕ್‌ ಜೊಕೋವಿಕ್‌, ಡೊಮಿನಿಕ್‌ ಥೀಮ್‌, ಸೆರೆನಾ ವಿಲಿಯಮ್ಸ್‌, ನವೋಮಿ ಒಸಾಕಾ ಅವರೆಲ್ಲ ಗೆಲುವಿನ ಓಟ ಮುಂದುವರಿಸಿ 4ನೇ ಸುತ್ತಿಗೆ ನೆಗೆದಿದ್ದಾರೆ.

Advertisement

5 ಸೆಟ್‌ಗಳ ಸೆಣಸಾಟ :

ಕಳೆದ ಬಾರಿಯ ಚಾಂಪಿಯನ್‌ ಜೊಕೋವಿಕ್‌ ಅಮೆರಿ ಕದ ಟೇಲರ್‌ ಫ್ರಿಟ್ಸ್‌ ಅವರನ್ನು ಮಣಿಸಲು 5 ಸೆಟ್‌ಗಳ ಹೋರಾಟ ನಡೆಸಿದ್ದು ಶುಕ್ರವಾರದ ಅಚ್ಚರಿ ಎನಿಸಿತು. ಈ ಪಂದ್ಯವನ್ನು ಜೊಕೋ 7-6 (7-1), 6-4, 3-6, 4-6, 6-2 ಅಂತರದಿಂದ ಗೆದ್ದರು. ಆದರೆ ಗಾಯಾಳಾಗಿರುವ ಜೊಕೋವಿಕ್‌ ಮುಂದಿನ ಪಂದ್ಯ ಆಡುವುದು ಅನುಮಾನ.

ನಂ.3 ಥೀಮ್‌ ಆತಿಥೇಯ ನಾಡಿನ ನಿಕ್‌ ಕಿರ್ಗಿಯೋಸ್‌ ವಿರುದ್ಧ ಮೇಲುಗೈ ಸಾಧಿಸಲಿಕ್ಕೂ 5 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಅಂತರ 4-6, 4-6, 6-3, 6-4, 6-4. ಯುಎಸ್‌ ಓಪನ್‌ ಚಾಂಪಿಯನ್‌ ಆಗಿರುವ ಥೀಮ್‌ ಅವರಿನ್ನು ಗ್ರಿಗರ್‌ ಡಿಮಿಟ್ರೋವ್‌ ವಿರುದ್ಧ ಸೆಣಸಲಿದ್ದಾರೆ.

ಮೊದಲ ಗ್ರ್ಯಾನ್‌ಸ್ಲಾಮ್‌ ಆಡುತ್ತಿರುವ ರಶ್ಯದ ಅಸ್ಲಾನ್‌ ಕರತ್ಸೇವ್‌ ನಂ. 8 ಆಟಗಾರ ಡೀಗೊ ಶಾರ್ಟ್ಸ್ಮನ್‌ ಅವರನ್ನು 6-3, 6-5, 6-3ರಿಂದ ಮಣಿಸಿದರು. ಕರತ್ಸೇವ್‌ ದಶಕದ ಬಳಿಕ “ಮೆಲ್ಬರ್ನ್ ಪಾರ್ಕ್‌’ನಲ್ಲಿ 4ನೇ ಸುತ್ತು ತಲುಪಿದ ಮೊದಲ ಶ್ರೇಯಾಂಕ ರಹಿತ ಆಟಗಾರನಾಗಿದ್ದಾರೆ.

Advertisement

ಯುಎಸ್‌ ಓಪನ್‌ ರನ್ನರ್ ಅಪ್‌ ಅಲೆಕ್ಸಾಂಡರ್‌ ಜ್ವೆರೇವ್‌ 6-3, 6-3, 6-1ರಿಂದ ಫ್ರಾನ್ಸ್‌ನ ಆ್ಯಡ್ರಿಯನ್‌ ಮುನ್ನಾರಿನೊ ಅವರನ್ನು ಮಣಿಸಿದರು.

ಸೆರೆನಾ, ಒಸಾಕಾ ಗೆಲುವು :

ವನಿತಾ ಸಿಂಗಲ್ಸ್‌ನಲ್ಲಿ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ರಶ್ಯದ ಅನಾಸ್ತಾಸಿಯಾ ಪೊಟಪೋವಾ ವಿರುದ್ಧ ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರೂ 7-6 (7-5), 6-2ರಿಂದ ಗೆದ್ದು ಬಂದರು.

ಜಪಾನಿನ ನವೋಮಿ ಒಸಾಕಾ 6-3, 6-2ರಿಂದ ಓನ್ಸ್‌ ಜೆಬ್ಯೂರ್‌ ಅವರನ್ನು ಮಣಿಸಿದರೆ, ಗಾರ್ಬಿನ್‌ ಮುಗುರುಜಾ ಕಜಾಕ್‌ಸ್ಥಾನದ ಜರೀನಾ ದಿಯಾಸ್‌ ಅವರನ್ನು 6-1, 6-1ರಿಂದ ಹಿಮ್ಮೆಟ್ಟಿಸಿದರು.

ಲಾಕ್‌ಡೌನ್‌; ವೀಕ್ಷಕರಿಗೆ ನಿರ್ಬಂಧ :

ಮೆಲ್ಬರ್ನ್ನ ಕ್ವಾರಂಟೈನ್‌ ಹೊಟೇಲ್‌ ಒಂದರಲ್ಲಿ ಮತ್ತೆ ಕೋವಿಡ್‌-19 ಕೇಸ್‌ ಕಂಡುಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾದ ಪ್ರೀಮಿಯರ್‌ ಡೇನಿಯಲ್‌ ಆ್ಯಂಡ್ರೂಸ್‌ ಶನಿವಾರದಿಂದ 5 ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಿಸಿದ್ದಾರೆ. ಇದರಿಂದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಸ್ಪರ್ಧೆಗಳಿಗೇನೂ ಅಡ್ಡಿಯಾಗದು. ಆದರೆ ಈ 5 ದಿನಗಳ ಕಾಲ ವೀಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next