ಬೆಂಗಳೂರು: ಡಿಜೆ ಬಳಕೆ ವಿಚಾರಕ್ಕೆ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಮತ್ತು ವಿಜಯನಗರ ಎಸಿಪಿ ಚಂದನ್ ಕುಮಾರ್ ನಡುವೆ ವಾಗ್ವಾದ ನಡೆದಿರುವ ಘಟನೆ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ನಡೆದಿದೆ.
ಭಾನುವಾರ ಸಂಜೆ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ಗಣೇಶ ವಿಸರ್ಜನೆ ಇತ್ತು. ಆಗ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಬಂದಿದ್ದರು. ಈ ವೇಳೆ ಡಿಜೆ ಬಳಸಲಾಗಿದ್ದು, ಅದನ್ನು ಪೊಲೀಸರು ಪ್ರಶ್ನಿಸಿ, ಕಮಿಷನರ್ ಆದೇಶದ ಪ್ರಕಾರ ಡಿಜೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ. ಅದರಿಂದ ಕೋಪಗೊಂಡ ಮುತಾಲಿಕ್ ಹಾಗೂ ಇತರೆ ಯುವಕರು ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಎಸಿಪಿ ಚಂದನ್ ಕುಮಾರ್, ಡಿಜೆಗೆ ಅವಕಾಶ ಇಲ್ಲ ಎಂದು ಸೂಚಿಸಿ, ಡಿಜೆ ಜಪ್ತಿ ಮಾಡಿದ್ದಾರೆ. ಇದೇ ವಿಚಾರಕ್ಕೆ ಎಸಿಪಿ ಚಂದನ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ನಡುವೆ ವಾಗ್ವಾದ ನಡೆದಿದೆ. ಮುಸ್ಲಿಂರ ಆಜಾನ್ ಜೋರಾಗಿ ಕೂಗಲು ಬಿಡುತ್ತಿರಾ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಅದಕ್ಕೆ ಉತ್ತರಿಸಿರುವ ಎಸಿಪಿ, ಈ ಬಗ್ಗೆ ದೂರು ನೀಡಿದರೆ, ಕ್ರಮಕೈಗೊಳ್ಳುತ್ತೇವೆ ಎಂದು ಸೂಚಿಸಿದ್ದಾರೆ. ಬಳಿಕ ಪ್ರಮೋದ್ ಮುತಾಲಿಕ್‌ಗೆ ಮನವೊಲಿಸಿ ಡಿಜೆ ಹೊರತು ಪಡಿಸಿ ಗಣೇಶ ವಿಸರ್ಜನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಎರಡು ದಿನಗಳ ಹಿಂದೆ ಕೆ.ಪಿ.ಅಗ್ರಹಾರದಲ್ಲೂ ಗಣೇಶ ವಿಸರ್ಜನೆ ವೇಳೆ ಕೆ.ಪಿ.ಅಗ್ರಹಾರ ಠಾಣೆಯ ಕ್ರೈಂ ಕಾನ್‌ಸ್ಟೆàಬಲ್, ಯುವಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿತ್ತು. ಡಿಜೆ ಬಳಕೆ ವಿಚಾರಕ್ಕೆ ಕಾನ್‌ಸ್ಟೇಬಲ್ ಮತ್ತು ಯುವಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ.