ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಎಸ್ ಡಿಪಿಐ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ತಪಾಸಣೆ ನಡೆಸಿರುವುದಾಗಿ ಟಿವಿ9 ವರದಿ ಮಾಡಿದೆ.
ನಗರದ ಹಲಸೂರು ಗೇಟ್ ಸಮೀಪ ಇರುವ ಎಸ್ ಡಿಪಿಐ ಕೇಂದ್ರ ಕಚೇರಿ ಸೇರಿದಂತೆ ಒಟ್ಟು ಮೂರು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಡಿಜೆ ಹಳ್ಳಿಯಲ್ಲಿರುವ ಪಕ್ಷದ ಕಚೇರಿ ಮೇಲೆಯೂ ದಾಳಿ ನಡೆಸಿ ಲ್ಯಾಪ್ ಟಾಪ್, ಕಂಪ್ಯೂಟರ್ ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಎಸಿಪಿ ಜಗನ್ನಾಥ್ ರೈ ನೇತೃತ್ವದ ಸಿಸಿಬಿ ತಂಡ ನ್ಯಾಯಾಲಯದ ಸರ್ಚ್ ವಾರಂಟ್ ಪಡೆದುಕೊಂಡು ಈ ದಾಳಿಯನ್ನು ನಡೆಸಿರುವುದಾಗಿ ವರದಿ ಹೇಳಿದೆ. ದಾಳಿಯ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ದಾಖಲೆ ಪರಿಶೀಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಎಸ್ ಡಿಪಿಐ ಪ್ರಧಾನ ಕಚೇರಿ ಸೇರಿದಂತೆ ಮೂರು ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ಯಾವೆಲ್ಲ ಮಾಹಿತಿ, ದಾಖಲೆಗಳು ಲಭ್ಯವಾಗಿದೆ ಎಂಬ ಬಗ್ಗೆ ಸಿಸಿಬಿ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.
ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವ ಕಚೇರಿ ಮೇಲೆಯೂ ಕೋರ್ಟ್ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿರುವುದಾಗಿ ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಡಿಜೆ, ಕೆಜಿ ಹಳ್ಳಿ ಗಲಭೆ ಸಂಬಂಧವಾಗಿ ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಎಸ್ ಡಿಪಿಐ ಕಚೇರಿಯಲ್ಲಿದ್ದ ಲ್ಯಾಪ್ ಟಾಪ್, ದಾಖಲೆ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.