Advertisement

DJ ಹಳ್ಳಿ , KG ಹಳ್ಳಿ ಗಲಭೆ ಪ್ರಕರಣದ ಹಿಂದೆ‌ ಐಸಿಸ್ ಪಾತ್ರ?; ಸಿಸಿಬಿ ತನಿಖೆ ವೇಳೆ ಬಹಿರಂಗ

01:47 AM Aug 18, 2020 | mahesh |

ಬೆಂಗಳೂರು: ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯ ಗಲಭೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಭಯೋತ್ಪಾದನೆ ಸಂಘಟನೆ ಪ್ರಕರಣದಲ್ಲಿ ಪಾತ್ರ ವಹಿಸಿರುವುದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ತನಿಖೆಯಲ್ಲಿ ಪತ್ತೆಯಾಗಿದೆ.

Advertisement

ಈ ಸಂಬಂಧ ಅಲ್‌-ಹಿಂದ್‌ ಸಂಘಟನೆಯ ಸದಸ್ಯ ಸಮೀವುದ್ದೀನ್‌ (28) ಎಂಬಾತನನ್ನು ಬಂಧಿಸಲಾಗಿದೆ. ಈತ ದಕ್ಷಿಣ ಭಾರತದಲ್ಲಿ ಸಂಘಟನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಮುಸ್ಲಿಂ ಸಮುದಾಯದ ಬಗ್ಗೆ ನವೀನ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಂತೆ ಎಸ್‌ಡಿಪಿಐ ಸದಸ್ಯರನ್ನು ಸಂಪರ್ಕಿಸಿದ್ದ ಸಮೀವುದ್ದೀನ್‌, ಮೊದಲು ಆರೋಪಿ ವಿರುದ್ಧ ದೂರು ನೀಡಿ ಬಂಧಿಸಬೇಕೆಂದು ಒತ್ತಾಯಿಸಬೇಕು. ಒಂದು ವೇಳೆ ಪೊಲೀಸರು ಬಂಧಿಸದಿದ್ದರೆ ಮುಂದಿನ ಕಾರ್ಯತಂತ್ರಕ್ಕೆ ಕೆಲವು ಯುವಕರನ್ನು ಸಂಘಟಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದ. ಆ. 11ರಂದು ರಾತ್ರಿ ಗಲಭೆ ಸಂದರ್ಭದಲ್ಲೂ ಈತ ಭೇಟಿ ಕೊಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ
ಡಿ.ಜೆ. ಹಳ್ಳಿ ಪ್ರಕರಣದಲ್ಲಿ ಭಯೋತ್ಪಾದನೆ ಸಂಘಟನೆ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ರಂಗಪ್ರವೇಶ ಮಾಡಲಿದೆ. ಸಿಸಿಬಿಯ ಅಧಿಕಾರಿಗಳು ಈಗಾಗಲೇ ಎನ್‌ಐಎ ಅಧಿಕಾರಿಗಳ ಜತೆ ಚರ್ಚಿಸಿದ್ದು, ಈ ಹಿಂದಿನ ಅಲ್‌-ಹಿಂದ್‌ ಸಂಘಟನೆ ಸದಸ್ಯರ ಮಾಹಿತಿ ನೀಡುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ರುದ್ರೇಶ್‌ ಕೊಲೆ ಪ್ರಕರಣದ ಲಿಂಕ್‌
ಸಮೀವುದ್ದೀನ್‌ 2016ರಲ್ಲಿ ನಡೆದ ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್‌ ಹತ್ಯೆ ಆರೋಪಿಗಳ ಜತೆ ಸಂಪರ್ಕ ಹೊಂದಿದ್ದ. ಕೆಲವು ವರ್ಷಗಳ ಹಿಂದೆ ತ.ನಾಡಿನ ಸ್ಥಳೀಯ ಪಕ್ಷವೊಂದರ ಮುಖಂಡ ಸುರೇಶ್‌ ಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿದ್ದ ಅಲ್‌ -ಹಿಂದ್‌ ಸಂಘಟನೆ ಸದಸ್ಯರ ಜತೆಯೂ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ.

Advertisement

ದೇಶದಲ್ಲಿ ನಿಷೇಧಕ್ಕೊಳಗಾಗಿ ರುವ ಐಸಿಸ್‌ ಸಂಘಟನೆಯ ಪ್ರೇರಿತ ಅಲ್‌-ಹಿಂದ್‌ ಸಂಘಟನೆ ಕಾರ್ಯಕರ್ತರು ಈ ಮೊದಲು ನಗರದಲ್ಲೂ ಸಕ್ರಿಯರಾಗಿದ್ದರು. ಸುದ್ದಗುಂಟೆಪಾಳ್ಯದ ಗುರಪ್ಪನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಸುಮಾರು 10ಕ್ಕೂ ಅಧಿಕ ಮಂದಿ ಅಕ್ರಮವಾಗಿ ವಾಸಿಸುತ್ತಿದ್ದರು. ಈ ಮಾಹಿತಿ ಪಡೆದು ಸಿಸಿಬಿ ಮತ್ತು ತಮಿಳುನಾಡಿನ ಕ್ರೈಂ ಬ್ರಾಂಚ್‌ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ ಸೋಲ ದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬಾಣವಾರದ ಮನೆಯೊಂದರ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ರಾಕೆಟ್‌ ಲಾಂಚರ್‌ ಮತ್ತು ಇತರ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲೂ ಸಮೀವುದ್ದೀನ್‌ ಕೈವಾಡದ ಬಗ್ಗೆ ಪೊಲೀಸರು ಶಂಕಿಸಿದ್ದರು.
ಸಮೀವುದ್ದೀನ್‌ ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಹಕಾರ ನೀಡಿದ್ದಾನೆ. ಸಿಸಿಟಿವಿ ಕೆಮರಾ ದೃಶ್ಯಗಳು ಮತ್ತು ಮೊಬೈಲ್‌ ಕರೆಗಳನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next