Advertisement
– ರೈಲ್ವೆ ಟ್ರಾಕ್ ಮೇಲೆ ನಿಂತ ದಿಯಾ, “ಪರ್ಮೆಂಟ್ ನೆಮ್ಮದಿ ಬೇಕು’ ಅಂತ ಆ ದೇವರನ್ನು ಪ್ರಾರ್ಥಿಸುತ್ತ ಕಣ್ಮುಚ್ಚಿಕೊಂಡೇ ರೈಲು ತನ್ನತ್ತ ಬರುವವರೆಗೂ ಟ್ರಾಕ್ ಮೇಲೆ ನಿಂತಿರುತ್ತಾಳೆ. ಇನ್ನೇನು ರೈಲು ಡಿಕ್ಕಿ ಹೊಡೆಯೋ ಹೊತ್ತಿಗೊಂದು ಮೊಬೈಲ್ ರಿಂಗಣಿಸುತ್ತೆ…’ ಆಮೇಲೆ ಏನಾಗುತ್ತೆ ಅನ್ನೋದೇ ಚಿತ್ರದ ವಿಶೇಷ. ಇದಿಷ್ಟು ಹೇಳಿದ ಮೇಲೆ “ದಿಯಾ’ ಮೇಲೆ ಕುತೂಹಲ ಇರದಿದ್ದರೆ ಹೇಗೆ? ಅಂಥದ್ದೊಂದು ಕುತೂಹಲದಲ್ಲೇ ಸಾಗುವ “ದಿಯಾ’ ಸದ್ಯದ ಮಟ್ಟಿಗೆ ಹೊಸ ಪ್ರಯತ್ನ ಎನ್ನಬಹುದು.
Related Articles
Advertisement
ಚಿತ್ರಕ್ಕೆ ಏನೆಲ್ಲಾ ಅಗತ್ಯವಿದೆಯೋ, ನೋಡುಗರಿಗೆ ಯಾವುದೆಲ್ಲಾ ಹಿಡಿಸುತ್ತದೆಯೋ ಅಷ್ಟನ್ನು ಮಾತ್ರ ಸಿದ್ಧಪಡಿಸಿ, ಉಣಬಡಿಸಿರುವ ನಿರ್ದೇಶಕರ ಪ್ರಯತ್ನ ಸಾರ್ಥಕವಾಗಿದೆ. ಎಲ್ಲೋ ಒಂದು ಕಡೆ ಇದು ಬೇಕಿತ್ತಾ ಅಂದುಕೊಳ್ಳುವ ಹೊತ್ತಿಗೆ ಹಿನ್ನೆಲೆ ಸಂಗೀತ ಇದೂ ಇರಲೇಬೇಕು ಎಂಬಷ್ಟರ ಮಟ್ಟಿಗೆ ಪ್ರಧಾನ ಪಾತ್ರ ವಹಿಸಿ, ನೋಡುಗರನ್ನು ಖುಷಿಪಡಿಸುತ್ತದೆ. ಹಾಗಂತ, ಕಥೆ ತೀರಾ ಫ್ರೆಶ್ ಅಲ್ಲ. ಹಿಂದೆ ಬಂದಿರುವ ಕಥೆಗಳ ಸ್ಫೂರ್ತಿಯಂತಿದ್ದರೂ, ಅದನ್ನು ಹೇಳುವ ಮತ್ತು ತೋರಿಸುವ ಬಗೆಯಲ್ಲಿ ಹೊಸತನವಿದೆ. ಸೃಷ್ಟಿಸಿರುವ ಪಾತ್ರಗಳಲ್ಲೂ ಲವಲವಿಕೆ ಇದೆ.
ಹಾಗಾಗಿ, ದಿಯಾ ನೋಡುವಷ್ಟೂ ಕಾಲ ಇಷ್ಟವಾಗುತ್ತಾಳೆ. ಇಲ್ಲಿ ಇಬ್ಬರು ಹುಡುಗರಿದ್ದಾರೆ. ಒಬ್ಬಳು ಹುಡುಗಿ ಇದ್ದಾಳೆ. ಅಲ್ಲಿಗೆ ಅದೊಂದು ತ್ರಿಕೋನ ಪ್ರೇಮಕಥೆ ಅಂದುಕೊಂಡವರಿಗೆ ತೆರೆ ಮೇಲೆ ಆಗುವ ಅಚ್ಚರಿಯೇ ಬೇರೆ. ಮೊದಲರ್ಧ ಒಂದು ಪ್ರೇಮಕಥೆ ನೋಡಿದವರಿಗೆ, ಸೆಕೆಂಡ್‌ಹಾಫ್ ಇನ್ನೊಂದು ಪ್ರೇಮಕಥೆ ಕಾಣಸಿಗುತ್ತೆ. ಕೊನೆಗೆ ಆ ಪ್ರೇಮಕಥೆಯಲ್ಲಿ ಯಾರೆಲ್ಲಾ ಪಾಸ್ ಆಗುತ್ತಾರೆ ಅನ್ನುವ ವಿಷಯ ಮಾತ್ರ ಅಷ್ಟೇ ಅದ್ಭುತವಾಗಿ ಕೊನೆಗಾಣಿಸಲಾಗಿದೆ. ಎಲ್ಲವನ್ನೂ ಇಲ್ಲೇ ಹೇಳುತ್ತಾ ಹೋದರೆ, ಅಷ್ಟೊಂದು ಮಜ ಎನಿಸಲ್ಲ. ಒಂದು ಹುಡುಗಿ, ಇಬ್ಬರು ಹುಡುಗರ ಲವ್ ಸ್ಟೋರಿ ಇಲ್ಲಿದೆಯಾದರೂ, ಆ ಪ್ರೀತಿ ಹೊಸ ರೀತಿಯಾಗಿದೆ ಅನ್ನೋದೇ ವಿಶೇಷ.
ದಿಯಾಗೆ ರೋಹಿತ್ ಮೇಲೆ ಪ್ರೀತಿ. ರೋಹಿತ್‌ಗೂ ದಿಯಾ ಮೇಲೆ ಪ್ರೀತಿ ಇದ್ದರೂ, ತೋರಿಸಿಕೊಳ್ಳದ ಹುಡುಗ. ದಿಯಾಳ ಚಡಪಡಿಕೆ, ತವಕ, ಆತುರ ಎಲ್ಲವನ್ನೂ ನೋಡಿದವರಿಗೆ ತಮ್ಮ ವಾಸ್ತವದ ಲವ್‌ಸ್ಟೋರಿ ನೆನಪಾದರೂ ಅಚ್ಚರಿ ಇಲ್ಲ. ಕೊನೆಗೂ ಅವಳ ಪ್ರೀತಿ ಒಪ್ಪುವ ಅವನು, ತಾನೂ ಇಷ್ಟಪಟ್ಟ ವಿಷಯ ಹೇಳಿಕೊಳ್ಳುತ್ತಾನೆ. ಇನ್ನೇನು ಇಬ್ಬರೂ ಮದುವೆ ಆಗುವ ನಿರ್ಧಾರ ಮಾಡುತ್ತಿದ್ದಂತೆಯೇ, ಅಲ್ಲೊಂದು ಘಟನೆ ನಡೆಯುತ್ತೆ. ಕಟ್ ಮಾಡಿದರೆ, ದಿಯಾ, ಮುಂಬೈ ಬಿಟ್ಟು ಬೆಂಗಳೂರಿಗೆ ಹಿಂದಿರುಗುತ್ತಾಳೆ. ಅಲ್ಲೊಬ್ಬ ಆದಿ ಎಂಬ ಫ್ರೆಂಡ್ ಪರಿಚಯವಾಗುತ್ತಾನೆ. ಗೆಳೆತನ ಪ್ರೀತಿಗೂ ತಿರುಗುತ್ತೆ. ಇನ್ನೇನು ಇಬ್ಬರೂ ಲವ್ ಒಪ್ಪಿಕೊಂಡು ಮದ್ವೆ ಆಗೋ ಮೂಡ್ ನಲ್ಲಿದ್ದಾಗ, ಅಲ್ಲೊಂದು ಘಟನೆ ನಡೆದು ಹೋಗುತ್ತೆ. ಆ ಘಟನೆ ಸರಿಹೋಗುತ್ತಿದ್ದಂತೆಯೇ ಮತ್ತೂಂದು ಶಾಕ್ ಆಗುತ್ತೆ. ಅದೂ ಸರಿ ಹೋಯ್ತು ಎನ್ನುತ್ತಿದ್ದಂತೆಯೇ ಇನ್ನೊಂದು ಘಟನೆಯೂ ನಡೆದುಹೋಗುತ್ತೆ.
ಆ ಘಟನೆಯಲ್ಲೇ ಇಡೀ ಚಿತ್ರದ ಜೀವಂತಿಕೆ ಇದೆ. ಆ ಟ್ವಿಸ್ಟ್‌ಗಳೇ ಚಿತ್ರದ ತಾಕತ್ತು ಎನ್ನಬಹುದು. ಖುಷಿ ತುಂಬಾ ಮುದ್ದಾಗಿ ಕಾಣುವುದರ ಜೊತೆ ಅಷ್ಟೇ ಲವಲವಿಕೆಯಲ್ಲೇ ನಟಿಸಿದ್ದಾರೆ. ದೀಕ್ಷಿತ್ ಶೆಟ್ಟಿ ಮುಗ್ಧ ಲವರ್ ಬಾಯ್ ಆಗಿ ಇಷ್ಟವಾದರೆ, ಪೃಥ್ವಿ ಅಂಬರ್ ಕೂಡ ಕಾಡುವ ಹುಡುಗನಾಗಿ ಗಮನಸೆಳೆಯುತ್ತಾರೆ. ಪವಿತ್ರಾ ಲೋಕೇಶ್ ಅಮ್ಮನಾಗಿ ಸೈ ಎನಿಸಿಕೊಂಡರೆ ಇತರರು ಸಿಕ್ಕ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಮೂಲಕ ಸಖತ್ ಸ್ಕೋರ್ ಮಾಡಿದ್ದಾರೆ. ವಿಶಾಲ್ ವಿಟ್ಠಲ್ ಮತ್ತು ಸೌರಭ್ ವಾಘ…ಮರೆ ಕ್ಯಾಮೆರಾ ಕೈಚಳಕ “ದಿಯಾ’ ಅಂದವನ್ನು ಹೆಚ್ಚಿಸಿದೆ. ಸಿನಿಮಾ ನೋಡಿ ಹೊರಬಂದವರಿಗೆ, ಕೊನೆಯಲ್ಲಿ “ಲೈಫ್ ಈಸ್ ಫುಲ್ ಆಫ್ ಸರ್‌ಪ್ರೈಸ್’ ಅನ್ನೋದು ಪಕ್ಕಾ ಆಗುತ್ತೆ.
–ವಿಜಯ್ ಭರಮಸಾಗರ