ಚಾಮರಾಜನಗರ: ಗೃಹಿಣಿಯರೇ ನಿಮ್ಮ ಮನೆಯಲ್ಲಿರುವ ಪ್ಲಾಸ್ಟಿಕ್, ಚೀಲ, ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ವಸ್ತುಗಳನ್ನು ನೀಡಿ, ಕಿವಿಗೆ ರಿಂಗ್, ಹೇರ್ ಬ್ಯಾಂಡ್, ಕ್ಲಿಪ್ ಇತ್ಯಾದಿ ಬಹುಮಾನವಾಗಿ ಪಡೆಯಿರಿ..! ಪ್ಲಾಸ್ಟಿಕ್ ನಿಷೇಧಕ್ಕೆ ಚಾಮರಾಜನಗರ ನಗರಸಭೆ ರೂಪಿಸಿರುವ ಆಕರ್ಷಕ ಕಾರ್ಯಕ್ರಮವಿದು. ಸ್ವತ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಅನ್ನು ಮರಳಿಸುವಂತೆ ಪ್ರೋತ್ಸಾಹಿಸಲು ನಗರಸಭೆ ಪ್ಲಾಸ್ಟಿಕ್ ಸಂಗ್ರಹಣಾ ಮಹೋತ್ಸವ ಆಯೋಜಿಸಿದೆ.
ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ಸ್ಥಾಪಿಸಿರುವ ಸಂಗ್ರಹಣಾ ಮಳಿಗೆಗೆ ತಂದರೆ ಮಹಿಳೆಯರಿಗೆ ಅವರು ಬಳಸುವ ಅಲಂಕಾರಿಕ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪುಟ್ಟ ಪರ್ಸ್, ಹೇರ್‌ಬ್ಯಾಂಡ್, ಹೇರ್ ಕ್ಲಿಪ್, ಮೆಹಂದಿ, ರೋಲ್ಡ್ ಗೋಲ್ಡ್ (ಉಮಾಗೋಲ್ಡ್) ಉಳ್ಳ ಕಿವಿಯ ರಿಂಗ್, ಕಿವಿಯೋಲೆ, ಮೂಗುತಿ ಮತ್ತಿತರ ಬಹುಮಾನ ನೀಡಲಾಗುತ್ತದೆ. ಆದರೆ ಒಂದು ಷರತ್ತು ಕನಿಷ್ಠ 50 ಗ್ರಾಮ್‌ಗಿಂತ ಹೆಚ್ಚಿನ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಣಾ ಮಳಿಗೆಗೆ ನೀಡಬೇಕು.
ದೀಪಾವಳಿ ಬಹುಮಾನ!: ದಸರಾ, ದೀಪಾವಳಿ ಅಂಗವಾಗಿ ಕಂಪನಿಗಳು, ಅಂಗಡಿಗಳು, ಆನ್‌ಲೈನ್ ಮಾರಾಟಗಾರರು ಆಕರ್ಷಕ ಬಹುಮಾನ ಪ್ರಕಟಿಸುವುದು ಸಾಮಾನ್ಯ. ಆದರೆ, ಚಾಮರಾಜನಗರ ನಗರಸಭೆ, ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನವನ್ನು ದಸರಾ ಮತ್ತು ದೀಪಾವಳಿ ಪ್ರಯುಕ್ತ ಎಂದು ಘೋಷಿಸುವ ಮೂಲಕ ಸಾರ್ವಜನಿಕರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಈ ಮಾಸಾಂತ್ಯದ ಮೊದಲ ವಾರ ನಗರದ ಚಾಮರಾಜೇಶ್ವರ ದೇವಸ್ಥಾನದ ಬಳಿ ಪ್ಲಾಸ್ಟಿಕ್ ಸಂಗ್ರಹ ಮಳಿಗೆ ತೆರಯಲಾಗಿತ್ತು.
ಈ ವೇಳೆ ಅನೇಕ ಗೃಹಿಣಿಯರು ಪ್ಲಾಸ್ಟಿಕ್ ನೀಡಿ ಬಹುಮಾನ ಪಡೆದುಕೊಂಡರು. ಮಹಿಳೆಯರಿಗೇನೋ ಅಲಂಕಾರಿಕ ಸಾಮಗ್ರಿ ನೀಡಲಾಯಿತು. ಆದರೆ, ಪುರುಷರಿಗೇನು ಬಹುಮಾನ ನೀಡುವುದು? ಪುರುಷರು ತಿಂಡಿ ಪ್ರಿಯರು ಎಂದೇನೋ, ನಗರಸಭೆಯವರು ಪ್ಲಾಸ್ಟಿಕ್ ನೀಡಿದ ಪುರುಷರಿಗೆ ಇಡ್ಲಿ, ಟೀ, ಕಾಫಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೇ, ಹಸಿರು ದಳ ಎಂಬ ಸ್ವಯಂ ಸೇವಾ ಸಂಸ್ಥೆ, ಪ್ಲಾಸ್ಟಿಕ್ ವಾಟರ್ ಬಾಟಲ್ ಸೇರಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಸಂಗ್ರಹಿಸಿ ನೀಡುವ ಪೌರಕಾರ್ಮಿಕರಿಗೆ ಪ್ರೋತ್ಸಾಹ ಧನ ನೀಡುತ್ತಿದೆ.
* ಕೆ.ಎಸ್. ಬನಶಂಕರ ಆರಾಧ್ಯ