Advertisement

ಪರಿಷೆಯಲ್ಲಿ ಚಿಮಣಿಯ ದೀಪಾವಳಿ

09:53 AM Nov 24, 2019 | Lakshmi GovindaRaj |

ಕೆಲ ದಶಕಗಳ ಹಿಂದಿನ ಪರಿಷೆ, ಇಂದಿನಂತೆ ಕಡಲೆಕಾಯಿಗೂ ಹೊರತಾದ ಬೇರೆ ಸಾಮಾನುಗಳ ಮಾರಾಟ ಜಾತ್ರೆ ಯಾಗಿರಲಿಲ್ಲ. ನೂರಾರು ಬಗೆಯ ಕಡಲೆಕಾಯಿಗಳನ್ನು ಗೋಪುರದಂತೆ ಕೂಡಿಸಿ, ಪಾವು- ಸೇರು- ಚಟಾಕುಗಳಲ್ಲಿ ಅಳೆದು ಮಾರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ರಾಮಕೃಷ್ಣ ಆಶ್ರಮದಿಂದ ಬಿ.ಎಂ.ಎಸ್‌. ಕಾಲೇಜಿನ ತನಕ, ದೊಡ್ಡ ಬಸವಣ್ಣನ ದೇಗುಲದ ಸುತ್ತ ಕಡಲೆಕಾಯಿ ಮಾರಾಟಗಾರರ ಭರಾಟೆ.

Advertisement

ಚೌಕಾಸಿ ವ್ಯಾಪಾರದಲ್ಲಿ ನಿಪುಣರಾಗಿದ್ದ ನನ್ನ ಚಿಕ್ಕಪ್ಪ, ತಮ್ಮ ಹತ್ತಾರು ಚೀಲಗಳಲ್ಲಿ ಆಯ್ದ ವಿವಿಧ ಬಗೆಯ ಕಡಲೆಕಾಯಿಗಳನ್ನು ತುಂಬಿಸಿಕೊಳ್ಳುತ್ತಿದ್ದರು. ಏತನ್ಮಧ್ಯೆ, ನಾವು ಹುಡುಗರಿಗೆ ಅವರು ಕೊಡುತ್ತಿದ್ದದ್ದು ಅಳತೆಯ ಲೆಕ್ಕಗಳನ್ನು, ಅದಕ್ಕೆ ಕಟ್ಟಿದ ಬೆಲೆಯನ್ನು ಕೂಡಿ- ಗುಣಿಸುವ ಅಸೈನ್‌ಮೆಂಟ್‌. ಇಳಿ ಬೆಳಕಿನ ಚಳಿಗಾಲದ ಆ ಸಂಜೆಗಳಲ್ಲಿ ಕಡಲೆಕಾಯಿ ವ್ಯಾಪಾರಿಗಳ ಚಿಮಣಿ ಬುಡ್ಡಿಯ ಬೆಳಕೇ ಕಣ್ಣಿಗೆ ರಾಚುವಂತಿರುತ್ತಿತ್ತು. ಇವರ ನಡುವೆ ದೀಪದ ಹಂಗಿಲ್ಲದೇ ವ್ಯಾಪಾರ ನಡೆಸುತ್ತಿದ್ದವರು ಹುರಿದ ಕಡಲೆಕಾಯಿ ಬೀಜ ಮಾರುವ ಕೈಗಾಡಿಯವರು.

ಇದ್ದಿಲ ಕಿಡಿ ಸಿಡಿಯುವ ಅವರ ಒಲೆಯ ಭಗಭಗ ದೂರದಿಂದಲೇ ನಮಗೆ ದೀಪಾವಳಿಯ ದೃಶ್ಯ ಕಟ್ಟಿಕೊಡುತ್ತಿತ್ತು. ಬಿಸಿ ಬಾಣಲೆ, ಕಾದ ಮರಳು, ಅದರ ಮೇಲೆ ಬಣ್ಣ ದಟ್ಟವಾಗುತ್ತಿದ್ದ ಕಡಲೆಕಾಯಿ ಬೀಜ- ಇವೆಲ್ಲಕ್ಕೂ ಮಿಗಿಲಾಗಿ ಆ ಮಾರಾಟಗಾರ ಲಯಬದ್ಧವಾಗಿ ಜಾಲರಿಯನ್ನು ಬಾಣಲೆಗೆ ತಾಗಿಸಿ ಸೃಷ್ಟಿಸುತ್ತಿದ್ದ ಶಬ್ದ ಮಾಧುರ್ಯ. ಇಡೀ ಪೊಟ್ಟಣದ ಕಡಲೆಕಾಯಿ ಬೀಜವನ್ನು ಗಾಡಿಯ ಸುತ್ತಲೇ ತಿಂದು ಮುಗಿಸುವಾಗ ಒಲೆಯ ಬಿಸಿ ಚಳಿಗಾಲದ ಆ ಸಂಜೆಯನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು.

* ಸುಧೀಂದ್ರ ಹಾಲ್ದೊಡ್ಡೇರಿ

Advertisement

Udayavani is now on Telegram. Click here to join our channel and stay updated with the latest news.

Next