ಶಿವಮೊಗ್ಗ/ಬೆಂಗಳೂರು:ಯುಗಾದಿ ಸಂದರ್ಭದಲ್ಲಿ ಆರಂಭವಾಗಿದ್ದ ಹಲಾಲ್ ಕಟ್ ಅಭಿಯಾನ ಇದೀಗ ದೀಪಾವಳಿ ಹಬ್ಬಕ್ಕೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿವೆ.
ಇದನ್ನೂ ಓದಿ:ಗಲಭೆ ಕೇಸ್: ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲೀದ್ ಜಾಮೀನು ಅರ್ಜಿ ವಜಾ
ಹಿಂದೂ ಸಂಘಟನೆಯ ಕರೆಯ ನಿಟ್ಟಿನಲ್ಲಿ ಮಂಗಳವಾರ (ಅಕ್ಟೋಬರ್ 18) ಶಿವಮೊಗ್ಗದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಹಲಾಲ್ ಕಟ್ ಅಭಿಯಾನ ಆರಂಭಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಮ್ಮುಖದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಹಿಂದೂ ಜನ ಜಾಗೃತಿ ಸಮಿತಿ, ದೀಪಾವಳಿಗೆ ಹಲಾಲ್ ಸರ್ಟಿಫೈಡ್ ವಸ್ತುಗಳನ್ನು ಬಳಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಹಿಂದೂ ಸಂಘಟನೆಗಳು, ಇಂದಿನಿಂದ ಪ್ರತಿ ಜಿಲ್ಲೆಯಲ್ಲಿ ಅಭಿಯಾನ ನಡೆಸುವಂತೆ ಕರೆ ಕೊಟ್ಟಿದ್ದವು. ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಖರೀದಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ಹಿಂದೂ ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ತಿಳಿಸಿದ್ದರು.
ಈ ವರ್ಷ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಕರೆ ನೀಡುತ್ತಿದ್ದೇವೆ. ಆ ನೆಲೆಯಲ್ಲಿ ಹಿಂದೂಗಳು ಹಲಾಲ್ ಸರ್ಟಿಫೈಡ್ ನ ಯಾವ ವಸ್ತುಗಳನ್ನೂ (ಮಾಂಸ, ಸೌಂದರ್ಯ ವರ್ಧಕ ವಸ್ತು, ಧಾನ್ಯ, ಹಣ್ಣು, ಔಷಧ) ದೀಪಾವಳಿ ಸಂದರ್ಭದಲ್ಲಿ ಬಳಕೆ ಮಾಡಬಾರದು ಎಂದು ಹಿಂದೂ ಜನಜಾಗೃತಿಯ ಪವನ್ ಕುಮಾರ್ ಶಿಂಧೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.