Advertisement
ಲಾಭಾಂಶ ವಿತರಣೆ: ಸುದ್ದಿಗೋಷ್ಠಿಯಲ್ಲಿ ಹಾಲಿನ ಖರೀದಿ ದರ ಹೆಚ್ಚಳ ಘೋಷಣೆ ಮಾಡಿದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ಈ ವರ್ಷ ಹಾಸನ ಹಾಲು ಒಕ್ಕೂಟವು ಸೆಪ್ಟಂಬರ್ ಅಂತ್ಯದವರೆಗೆ 40 ಕೋಟಿ ರೂ. ಲಾಭ ಗಳಿಸಿದ್ದು, ಲಾಭಾಂಶವನ್ನು ಹಾಲು ಉತ್ಪಾದಕರಿಗೆ ಹಂಚುವ ನಿಟ್ಟಿನಲ್ಲಿ ಹಾಲಿನ ಖರೀದಿ ದರವನ್ನು ಒಂದು ರೂ. ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದರು.
Related Articles
Advertisement
ಹಾಸನ ಹಾಲಿನ ಡೇರಿಯಲ್ಲಿರುವ ಯುಎಚ್‌ಟಿ ಹಾಲಿನ ಘಟಕವನ್ನು 2 ಲಕ್ಷ ಲೀ. ನಿಂದ 4 ಲಕ್ಷ ಲೀ.ಗೆ ವಿಸ್ತರಿಸಲಾಗುತ್ತಿದೆ. ವಿಸ್ತರಿತ ಘಟಕವು ಡೆಸೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ. ಹಾಸನ ಹಾಲು ಒಕ್ಕೂಟದ ಅಭಿವೃದ್ಧಿ ಯೋಜನೆಗಳಿಗೆ ಹಿಂದಿನ ಸಮ್ಮಿಶ್ರ ಸರ್ಕಾರ 504 ಕೋಟಿ ರೂ. ಯೋಜನೆಗಳಿಗೆ ಮಂಜೂರಾತಿ ನೀಡಿತ್ತು. ಆ ಪೈಕಿ 330 ಕೋಟಿ ರೂ. ಅಂದಾಜಿನ ಮೆಗಾಡೇರಿ ನಿರ್ಮಾಣ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಕೌಶಿಕ ಬಳಿ ನಿರ್ಮಾಣವಾಗಲಿದೆ. ಮೆಗಾಡೇರಿ ನಿರ್ಮಾಣಕ್ಕಾಗಿ 50 ಎಕರೆಯನ್ನು 10 ಕೋಟಿ ರೂ.ಗೆ ಕೈಗಾರಿಕಾಭಿವೃದ್ಧಿ ಕೇಂದ್ರದಿಂದ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು. ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ವ್ಯವಸ್ಥಾಪಕ ಜಯಪ್ರಕಾಶ್ ಅವರೂ ಉಪಸ್ಥಿತರಿದ್ದರು.
ರಾಜ್ಯವು ಆರ್‌ಸಿಇಪಿ ವಿರೋಧಿ ನಿರ್ಣಯ ಅಂಗೀಕರಿಸಲಿ: ಕೇಂದ್ರ ಸರ್ಕಾರವು 16 ದೇಶಗಳೊಂದಿಗೆ ಅಮದು ಮತ್ತು ರಫ್ತು ವ್ಯವಹಾರ ಸುಂಕ ವಿನಾಯತಿ ಒಪ್ಪಂದ ( ಆರ್‌ಸಿಇಪಿ) ಮಾಡಿಕೊಳ್ಳುವುದರಿಂದ ದೇಶದ ಹೈನು ಉದ್ಯಮಕ್ಕೆ ಭಾರೀ ಪೆಟ್ಟು ಬೀಳಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಒತ್ತಾಯಿಸುವ ನಿರ್ಣವನ್ನು ರಾಜ್ಯ ಸರ್ಕಾರ ಅಂಗೀಕರಿಸಲು ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕೆಂದು ಕೆಎಂಎಫ್ ನಿರ್ದೇಶಕರೂ ಆದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ ಹೈನು ಉದ್ಯಮಕ್ಕೆ ರೇಷ್ಮೆ ಉದ್ಯಮದ ಪರಿಸ್ಥಿತಿ ಬರಲಿದೆ. ನ್ಯೂಜಿಲೆಂಡ್ ಹಾಗೂ ಆಸ್ಪ್ರೆಲಿಯಾ ಉತ್ಪಾದಿಸುವ ಹಾಲಿನಲ್ಲಿ ತಮ್ಮ ದೇಶಗಳಲ್ಲಿ ಕೇವಲ ಶೇ. 10 ರಷ್ಟನ್ನು ಮಾತ್ರ ಬಳಸುತ್ತಿವೆ. ಅಲ್ಲಿನ ಶೇ.90 ರಷ್ಟು ಹೈನು ಉತ್ಪನ್ನಗಳಿಗೆ ಭಾರತ ಮಾರುಕಟ್ಟೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಆರ್‌ಸಿಇಪಿ ಒಪ್ಪಂದದಿಂದ ಮೊದಲು ಹೊಡೆತ ಬೀಳುವುದು ಗುಜರಾತ್ ಮತ್ತು ಕರ್ನಾಟಕಕ್ಕೆ. ಏಕೆಂದರೆ ದೇಶದಲ್ಲಿ ಇ ಎರಡೂ ರಾಜ್ಯಗಳೂ ಹಾಲು ಉತ್ಪಾದನೆಯಲ್ಲಿ ಒಂದು ಮತ್ತು 2 ನೇ ಸ್ಥಾನದಲ್ಲಿವೆ.
ಆದ್ದರಿಂದ ರಾಜ್ಯದಿಂದ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಾಡ ಏರಲು ಮುಂದಾಗಬೇಕು. ವಿರೋಧ ಪಕ್ಷಗಳ ಮುಖಂಡರೂ ಪ್ರಧಾನಿಯವರ ಬಳಿ ನಿಯೋಗ ತೆರಳಿ ಆರ್‌ಸಿಇಪಿ ಒಪ್ಪಂದದಿಂದ ದೇಶದ ಹೈನುಗಾರಿಕೆ ಮತ್ತು ತೋಟಗಾರಿಕೆಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.