Advertisement
ಭಗವಂತನ ವರಾಹ ಅವತಾರದ ಸನ್ನಿವೇಶದಲ್ಲಿ ಭೂಮಿದೇವಿಯೊಂದಿಗೆ ಆತನದ್ದಾದಂತಹ ದೈಹಿಕವಾದ ಸಂಬಂಧವೇರ್ಪಟ್ಟು ಅದರಿಂದ ನರಕಾಸುರನ ಜನನ ವಾಗುತ್ತದೆ. ಬ್ರಹ್ಮ ದೇವರ ಕುರಿತು ತಪಶ್ಚರ್ಯೆಯನ್ನು ನಡೆಸಿದಂತಹ ನರಕಾಸುರ, ತಾನು ಜೀವನದಲ್ಲಿ ತನ್ನ ಮಾತಾ-ಪಿತೃಗಳು ಒಟ್ಟಾಗಿ ಬಂದು ತನ್ನಲ್ಲಿ ಯುದ್ಧ ಮಾಡಿ ಜಯಿಸುವುದಕ್ಕೆ ಮುಂದಾದಾಗ ಅವರ ಕೈಯ ಆಯುಧದಿಂದಲೇ ತನಗೆ ಮರಣವೆಂದು ಬ್ರಹ್ಮ ದೇವರಲ್ಲಿ ವರವನ್ನು ಬೇಡಿರುತ್ತಾನೆ.
Related Articles
Advertisement
ಇದನ್ನೂ ಓದಿ:ಕರ್ನಾಟಕ ಸೇರಿ ಹಲವು ಕಡೆ ಆ್ಯಕ್ಟ್ಸನ್ ಲಸಿಕೆ ಪ್ರಯೋಗ
ಧನತ್ರಯೋದಶಿಯಂದು ಸಾಯಂಕಾಲ ಸರ್ವ ವಿಧವಾದಂತಹ ಉತ್ತಮ ವಸ್ತುಗಳನ್ನು ಸಂಗ್ರಹಿಸುವುದರ ಮೂಲಕ ದೀಪಾವಳಿಯ ಆಚರಣೆಗೆ ಬೇಕಾದಂತಹ ವಾತಾವರಣವನ್ನು ಮಾನಸಿಕವಾಗಿ ನಿರ್ಮಿಸಿಕೊಳ್ಳುತ್ತಾ ನರಕ ಚತುರ್ದಶಿಯ ಮುನ್ನಾದಿನವೇ ಮರುದಿವಸದ ಸ್ನಾನಕ್ಕೆ ಬೇಕಾದಂತಹ ಸಿದ್ಧತೆಗಳನ್ನು ಜೋಡಿಸಿ ಕೊಂಡು ಸಂಭ್ರಮಿಸುತ್ತಾ ಯಮದೀಪಾದಿಗಳನ್ನು ಭಕ್ತಿಯಿಂದ ಬೆಳಗಿಸಿ ಉಷಃಕಾಲದಲ್ಲಿಯೇ ಎದ್ದು ಅತ್ಯಂತ ಶ್ರದ್ಧಾಭಕ್ತಿಗಳಿಂದ ಸ್ನಾನಾದಿಗಳನ್ನು ನಡೆಸಿ ಮನೆಯ ದೇವರಿಗೆ ಎಣ್ಣೆ ಶಾಸ್ತ್ರಾದಿಗಳನ್ನು ಜತೆಗೆ ಅಭಿಷೇಕಾದಿಗಳನ್ನು ನಡೆಸಿ ಪ್ರಸಾದ ರೂಪವಾದ ಜಲವನ್ನು ಮುನ್ನಾದಿನ ಸಂಭ್ರಮದಿಂದ ಸಿದ್ಧಗೊಳಿಸಿದ ನೀರಿಗೆ ಸಂಯೋಜಿಸುತ್ತಾರೆ. ಅಶ್ವತ್ಥಾಮಾದಿ ಚಿರಂ ಜೀವಿಗಳ ಸ್ಮರಣೆಯಿಂದ ದೇಹದ ಸರ್ವಾಂಗಕ್ಕೂ ತೈಲಾದಿಗಳನ್ನು ಲೇಪಿಸಿಕೊಂಡು, ಭಾವನಾತ್ಮಕವಾಗಿ ಬಿಸಿನೀರ ಸ್ನಾನವನ್ನು ಗೈದು, ಪುನೀತರಾಗಿ ಪೂಜಾದಿಗಳನ್ನು ನಡೆಸುವುದರ ಮೂಲಕ ನರಕ ಚತುರ್ದಶಿ ಸಂಪನ್ನಗೊಳ್ಳುತ್ತದೆ.
ರೈತಾಪಿ ಜನರೂ ಸಾಮಾನ್ಯವಾಗಿ ನವರಾತ್ರಿಯಿಂದ ಆರಂಭಿಸಿ ದೇವರಿಗೆ ನಡೆಸುವ ಪೂಜಾದಿ ಗಳಲ್ಲಿ ಅವಲಕ್ಕಿಯನ್ನು ಉಪಯೋಗಿಸಿದರೆ ವಿಜಯ ದಶಮಿಯ ಅನಂತರ ಅವಲಕ್ಕಿಯ ಉಪಯೋಗ ವನ್ನು ನಿಲ್ಲಿಸಿಬಿಡುತ್ತಾರೆ. ಅನಂತರ ಅವಲಕ್ಕಿ ಯನ್ನು ಉಪಯೋಗಿಸಿವುದು ನರಕ ಚತುರ್ದಶಿಯಂದು ದೇವರ ಸಮರ್ಪ ಣೆಗೆಂದು ಸಿದ್ಧಪಡಿಸುವ ಪಂಚ ಕಜ್ಜಾಯದ ಮೂಲಕವೇ. ಆ ದಿವಸ ಹೊಸ ಭತ್ತದಿಂದ ಸಿದ್ಧಪಡಿಸಿದ ಪಂಚಕಜ್ಜಾಯವನ್ನು ದೇವರಿಗೆ ಸಮರ್ಪಿಸಿ ಅನಂತರ ಹೊಸತಾದ ಅವಲಕ್ಕಿಯನ್ನು ಉಪಯೋಗಿಸುವ ಪದ್ಧತಿ ತುಳುನಾಡಿನಲ್ಲಿದೆ. ನರಕ ಚತುರ್ದಶಿಯ ಮರುದಿವಸ ಅಥವಾ ರಾತ್ರಿ ಅಮಾವಾಸ್ಯೆ ತಿಥಿ ಯಾವತ್ತು ವ್ಯಾಪ್ತತೆಯನ್ನು ಹೊಂದುತ್ತದೋ ಅದೇ ದಿವಸ ಊರ ದೇವರಿಗೆ ದೀಪಗಳನ್ನಿಟ್ಟು ರಂಗಪೂಜಾದಿಗಳನ್ನು ನಡೆಸಿ ಊರವರೆಲ್ಲ ಗ್ರಾಮ ದೇವರಿಗೆ ದೀಪಾವಳಿಯ ಹಬ್ಬವನ್ನು ಸಮರ್ಪಿಸಿದ ಅನಂತರ ತಮ್ಮ ಮನೆಗಳಲ್ಲಿ ಹಬ್ಬದ ಸಿದ್ಧತೆಗೆ ತೊಡಗುತ್ತಾರೆ. ತಮ್ಮ ಮನೆಗಳಲ್ಲಿ ಧಾನ್ಯಲಕ್ಷ್ಮೀಗೆ, ಕೃಷಿ ಪರಿಕರಗಳಿಗೆ, ತಮ್ಮ ಮನೆಯ ಎಲ್ಲ ರೀತಿಯ ಸುವಸ್ತುಗಳಿಗೆ, ಅತ್ಯಂತ ಬೆಲೆಬಾಳುವಂತಹ ತಮ್ಮ ಜೀವನದ ಅವಿಭಾಜ್ಯವೆನಿಸಿದಂತಹ ಜೀವನೋಪಾಯ ವಸ್ತುಗಳಿಗೂ ಲಕ್ಷ್ಮೀದೇವಿಯ ಸಾನಿಧ್ಯವನ್ನು ಶ್ರದ್ಧಾ ಭಕ್ತಿಯಿಂದ ಪರಿಕಲ್ಪಿಸಿ, ಪೂಜಾದಿಗಳನ್ನು ನಡೆಸಿ ದೀಪಾವಳಿ ಸಂಪನ್ನಗೊಳ್ಳುತ್ತದೆ.
ಪ್ರಕೃತಿಯಲ್ಲಿ ಅಮಾವಾಸ್ಯೆಯ ಪರಿಣಾಮವಾಗಿ ಗಾಢಾಂಧಕಾರ ಆವರಿಸಿದಾಗ ಸರಿಯಾದ ರೀತಿಯಲ್ಲಿ ದೀಪವನ್ನು ಉರಿಸಿದಾಗ ದೀಪದ ಅಭಿಮಾನೀ ದೇವತೆ ಅನ್ನಿಸಿಕೊಂಡ ಮಹಾಲಕ್ಷ್ಮೀ ದೀಪ ಉರಿಯುತ್ತಿರುವ ಆ ಗೃಹದೊಳಗೆ ತಾನು ತನ್ನ ಬಲಗಾಲನ್ನಿಟ್ಟು ಪ್ರವೇಶಿಸಿ ಆ ಮನೆಯ ಸಂಪತ್ತಿಗೂ ಆ ಮನೆಯ ಸರ್ವವಿಧವಾದ ಶ್ರೇಯಸ್ಸಿಗೂ ಕಾರಣಳಾಗುತ್ತಾಳೆ. ಹಾಗಾಗಿ ದೀಯತೇ ಸರ್ವಭೋಗಾಂಶ್ಚ ಪಾತಿಶತ್ರೋಃ ಗದಾತ್ ಭಯಾತ್ “ದೀಪ’ ಎನ್ನುವಂತಹ ಶಬ್ದದ “ದೀ’ ಎನ್ನುವ ಅಕ್ಷರ ನಮ್ಮ ಜೀವನದಲ್ಲಿ ಸರ್ವವಿಧವಾದ ಸುಖ-ಸಂತೋಷಗಳನ್ನು ಅನುಗ್ರಹಿಸುವ ಪ್ರಾತಿನಿಧ್ಯವನ್ನು ಹೊಂದಿದರೆ ಅನಂತರದ “ಪ’ ಎನ್ನುವ ಅಕ್ಷರ ಶತ್ರುಗಳ ಬಾಧೆಯಿಂದ ದಾರಿದ್ರ್ಯದ ತೊಂದರೆಗಳಿಂದ ಇನ್ನಿತರ ಆಪತ್ತುಗಳಿಂದ ನಮ್ಮನ್ನು ರಕ್ಷಿಸಿ ನಮಗೆ ಸರ್ವವಿಧವಾದಂತಹ ಸುಖ-ಸಂತೋಷಗಳ ಭಾವಾರ್ಥಗಳ ಪ್ರತಿನಿಧೀಕರಣವನ್ನು ಹೊಂದಿದೆ. ಹೀಗಾಗಿ ದೀಪಗಳ ಸಾಲನ್ನು ಮನೆಯ ಮುಂದೆ ಶ್ರದ್ಧಾಭಕ್ತಿಯಿಂದ ಬೆಳಗಿಸಿ ಮಹಾಲಕ್ಷ್ಮೀ ಸ್ಥಿರವಾಗಿ ಸನ್ನಿಹಿತಳಾಗಬೇಕು ಎನ್ನುವ ಕಾರಣಕ್ಕೆ ಭಗವಂತನಿಗೆ ಪ್ರಿಯವೆನಿಸಿದಂತಹ ಅಮಾವಾಸ್ಯೆಯ ಪರ್ವಕಾಲದಲ್ಲಿ ಲಕ್ಷ್ಮೀ ಪೂಜೆಯನ್ನು ನಡೆಸುವುದರಿಂದ ಸರ್ವವಿಧ ದಾರಿದ್ರ್ಯದಿಗಳನ್ನು ಕೇವಲ ಸಾಂಪತ್ತಿಕ ದಾರಿದ್ರ್ಯ ಮಾತ್ರವಲ್ಲ ಮಾನಸಿಕ, ವ್ಯಾವಹಾರಿಕ, ಆರ್ಥಿಕ, ಸಾಮಾಜಿಕ ದಾರಿದ್ರ್ಯಗಳನ್ನು ಕಳಚಿಕೊಂಡು ಸರ್ವಸಂಪನ್ನತೆಯಿಂದ ಬಾಳುವ ಸಂಕೇತವಾಗಿ ದೀಪಾವಳಿ ಆಚರಿಸಲ್ಪಡುತ್ತಿದೆ.
ದೀಪವು ಜ್ಞಾನದ ಸಂಕೇತವೂ ಹೌದು. ದೀಪವನ್ನು ಶ್ರದ್ಧಾಭಕ್ತಿಯಿಂದ ಹಚ್ಚಿ ಮಹಾಲಕ್ಷ್ಮೀಯನ್ನು ಪೂಜಿ ಸುವುದರಿಂದ ಶುಭತ್ವವು, ನಿರಂತರವಾದಂತಹ ಕಲ್ಯಾಣ ಯೋಗಗಳು, ಯಾವುದೇ ರೀತಿಯ ಅನಿಷ್ಟ, ನಾವು ಮಾನಸಿಕವಾಗಿ ಇನ್ನೊಬ್ಬರಿಗೆ ಅನಿಷ್ಠ ಚಿಂತಿಸುವ ಪ್ರವೃತ್ತಿ ಅಥವಾ ಇನ್ನೊಬ್ಬರಿಂದ ನಮಗೆ ಅನಿಷ್ಟವನ್ನು ಚಿಂತಿಸುವ ಸನ್ನಿವೇಶಗಳು ಬರದಂತೆ ಮಹಾಲಕ್ಷ್ಮೀ ಅನುಗ್ರಹಿಸುತ್ತಾಳೆ ಎನ್ನುವ ಶ್ರದ್ಧಾಭಕ್ತಿಯ ಭಾವನೆಗಳೊಂದಿಗೆ ದೀಪಾವಳಿ ಆಚರಿಸಲ್ಪಡುತ್ತಿದೆ. ನಾಡಿನ ಜನತೆಗೆ ದೀಪಾವಳಿಯ ಈ ಪರ್ವಕಾಲ ಸರ್ವವಿಧವಾದಂತಹ ಅನಿಷ್ಟಗಳ ಪರಿಹಾರದೊಂದಿಗೆ ಸರ್ವಾಭೀಷ್ಟಗಳು ಸಿದ್ಧಿಸಲೆಂದು ಮಹಾಲಕ್ಷ್ಮೀಯನ್ನು ಪ್ರಾರ್ಥಿಸೋಣ.
– ವಿ| ಪಂಜ ಭಾಸ್ಕರ ಭಟ್