Advertisement

ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ ಗೂಡುದೀಪ,ಹಣತೆ

11:29 PM Oct 25, 2019 | Sriram |

ಕಾರ್ಕಳ: ದೀಪಾವಳಿ ಆಚರಣೆಗೆ ನಗರದಲ್ಲಿ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಗೂಡುದೀಪಗಳು, ಹಣತೆಗಳು, ಪಟಾಕಿಗಳು ದೀಪಾವಳಿಯ ಪ್ರಮುಖ ಆಕರ್ಷಣೆಯಾಗಿದ್ದು, ವಿವಿಧ ಮಾದರಿಯ ಗೂಡುದೀಪ, ಹಣತೆಗಳು ನಗರದ ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ.

Advertisement

ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳೊಂದಿಗೆ ನವೀನ ವಿನ್ಯಾಸದ ಗೂಡುದೀಪ ಮಳಿಗೆಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಬಟ್ಟೆ, ಪ್ಲಾಸ್ಟಿಕ್‌ ಮತ್ತು ಬಣ್ಣದ ಕಾಗದಗಳಿಂದ ಮಾಡಿದ ಗೂಡು ದೀಪಗಳು ಮಾರುಕಟ್ಟೆಯಲ್ಲಿವೆ. ಇವುಗಳ ಪೈಕಿ ಬಣ್ಣದ ಕಾಗದದ ಗೂಡುದೀಪಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಬಹುತೇಕ ಅಂಗಡಿ ಮಳಿಗೆಗಳಿಗೆ ಗೂಡುದೀಪಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತಿದೆ. ಬಟ್ಟೆಯಿಂದ ಮಾಡಿದ ಗೂಡುದೀಪಗಳಲ್ಲಿ ಸುಮಾರು 25ಕ್ಕೂ ಮಿಕ್ಕಿದ ವಿನ್ಯಾಸಗಳಿದ್ದು, 60 ರೂ.ಗಳಿಂದ 350 ರೂ. ಬೆಲೆಯಿರುವ ಬಗೆಬಗೆಯ ಗೂಡುದೀಪಗಳಿವೆ.

ಹಣತೆಗಳ ಆಕರ್ಷಣೆ
ಮಣ್ಣಿನಿಂದ ತಯಾರಿಸಿದ ಹಾಗೂ ಪಿಂಗಾಣಿ ಹಣತೆಗಳ ಖರೀದಿಯೂ ಮಾರುಕಟ್ಟೆಯಲ್ಲಿ ಜೋರಾಗಿದೆ. ಪಿಂಗಾಣಿ ಹಣತೆಗಳಿಗೆ ಹೋಲಿಕೆ ಮಾಡಿದಲ್ಲಿ ಮಣ್ಣಿನ ಹಣತೆಗಳ ಬೆಲೆ ತುಸು ಕಡಿಮೆ. ಮಣ್ಣಿನ ಒಂದು ಹಣತೆಗೆ ಅದರ ವಿನ್ಯಾಸಕ್ಕೆ ಅನುಗುಣವಾಗಿ ರೂ. 3ರಿಂದ 10 ರೂ. ಬೆಲೆಯಿದೆ. ಹಣತೆಗಳನ್ನು ಅಂದವಾಗಿ ಜೋಡಿಸಿಟ್ಟ ಸೆಟ್‌ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹಣತೆಗಳ ಬದಲು ಬಣ್ಣದ ಬಣ್ಣದ ಲೈಟಿಂಗ್ಸ್‌ ಖರೀದಿಸುವತ್ತ ಕೆಲ ಗ್ರಾಹಕರು ಮುಂದಾಗಿರುವುದು ಕಂಡುಬರುತ್ತಿದೆ.

Advertisement

ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ
ದೀಪಾವಳಿ ಪ್ರಯುಕ್ತ ಹೊಸ ಬಟ್ಟೆ ಖರೀದಿಸಲು ಗ್ರಾಹಕರು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಹಲವು ಬಟ್ಟೆ ಮಳಿಗೆಗಳು ದರ ಕಡಿತಗೊಳಿಸಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಕಾರ್ಕಳದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಬ್ಬದ ಸಂಭ್ರಕ್ಕೆ ಕೊಂಚ ಮಂಕಾಗಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ಹಣ್ಣಿನ ಮತ್ತು ಹೂವಿನ ದರದಲ್ಲಿ ಇಂದಿನ ತನಕ ಏರಿಕೆಯಾಗಿಲ್ಲ. ನಾಳೆಯಿಂದ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.

ಪಟಾಕಿಗಳತ್ತ ಮಕ್ಕಳ ಚಿತ್ತ ಹರಿದಿದ್ದು, ಪಟಾಕಿ ಪರವಾನಿಗೆ ಹೊಂದಿದವರು ಮಾತ್ರ ಮಾರಾಟ ಮಾಡಲು ಅವಕಾಶವಿದೆ ಎಂದು ಕಾರ್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಪರಿಸರಸ್ನೇಹಿ ಗೂಡುದೀಪ
ಕಣ್ಣು ಕೋರೈಸುವ, ಪರಿಸರಕ್ಕೆ ಹಾನಿ ಮಾಡುವ ಕೃತಕ ಬೆಳಕು, ಅಲಂಕಾರಿಕಗಳ ಮಧ್ಯೆ ಸಾಂಪ್ರದಾಯಿಕ ಆಚರಣೆಗಳು ಉಳಿಯಬೇಕು ಎನ್ನುವ ಉದ್ದೇಶದೊಂದಿಗೆ ಜಾಗೃತಿ ನಿರಂತರವಾಗಿ ನಡೆಯುತ್ತಿರುವುದರಿಂದ ಪರಿಸರ ಸ್ನೇಹಿ ಸಾಂಪ್ರದಾಯಿಕ ಗೂಡುದೀಪಗಳಿಗೂ ಬೇಡಿಕೆ ಕುದುರಿದೆ.

ಗೂಡುದೀಪಗಳಲ್ಲಿ ಆಧುನಿಕ ಹಾಗೂ ಸಾಂಪ್ರದಾಯಿಕ ಎಂಬ ವಿಭಾಗವಿದ್ದು, ಸಿಡಿ, ಬಲ್ಬ್, ಆಲಂಕಾರಿಕ ವಸ್ತುಗಳನ್ನು ಬಳಸಿ ರಚಿಸುವುದು ಆಧುನಿಕ ಶೈಲಿಯಾದರೆ, ಬಿದಿರು, ಬಣ್ಣದ ಕಾಗದ, ನೂಲು, ಮಣಿ, ಕಾಳು, ಬೀಜ, ಐಸ್‌ಕ್ರೀಂ ಕಡ್ಡಿ, ಭತ್ತದ ತೆನೆ ಬಳಸಿ ಪರಿಸರಸ್ನೇಹಿ ಗೂಡುದೀಪಗಳನ್ನು ವಿವಿಧ ವಿನ್ಯಾಸಗಳೊಂದಿಗೆ ತಯಾರಿಸುವುದು ಸಾಂಪ್ರದಾಯಿಕ ಶೈಲಿ.

ಆಧುನಿಕ ಶೈಲಿಯ ಗೂಡುದೀಪಗಳು ಅಂಗಡಿ ಮುಂಗಟ್ಟುಗಳಲ್ಲಿ ಹೇರಳವಾಗಿ ಲಭ್ಯವಿವೆ. ಸಾಂಪ್ರದಾಯಿಕ ಗೂಡುದೀಪಗಳನ್ನು ಮನೆಗಳಲ್ಲಿ ತಯಾರಿಸುವವರೂ ಇದ್ದಾರೆ.

ಧಾರ್ಮಿಕ ಹಿನ್ನೆಲೆ
ದೀಪಾವಳಿ ಹಾಗೂ ಲಕ್ಷದೀಪ ಉತ್ಸವಗಳಲ್ಲಿ ಮಣ್ಣಿನ ಹಣತೆಗೆ ಹೆಚ್ಚಿನ ಬೇಡಿಕೆ ಇದೆ. ದೇವಾಲಯ, ಶ್ರದ್ಧಾಕೇಂದ್ರಗಳಲ್ಲಿ ಧಾರ್ಮಿಕ ಹಿನ್ನೆಲೆಯಲ್ಲೂ ಹಣತೆಗೆ ಒತ್ತು ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next