ದೀಪಾವಳಿ ಹಬ್ಬದ ಸಮಯದಲ್ಲಿ ಗೋಪೂಜೆ ಎಂದರೆ ಅದರ ಸಂಭ್ರಮವೇ ಬೇರೆ. ಮುಂಜಾನೆಯಿಂದಲೇ ಮನೆಯಲ್ಲಿ ಸಾಕಿದ ದನಕರುಗಳಿಗೆ ಸ್ನಾನವನ್ನು ಮಾಡಿಸಿ, ಅವುಗಳಿಗೆ ವಿಶೇಷ ಸಿಂಗಾರ ಮಾಡಲಾಗುತ್ತದೆ. ಹೂವಿನ ಮಾಲೆ, ಹಿಂಗಾರ, ಶ್ರೀಗಂಧ ಸೇರಿದಂತೆ ವಿಧವಿಧವಾಗಿ ಗೋವುಗಳನ್ನು ಸಿಂಗರಿಸಲಾಗುತ್ತದೆ. ಮಕ್ಕಳೆಲ್ಲ ಕರುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಸಿಂಗರಿಸಿದರೆ, ಹಿರಿಯರು ಗದ್ದೆಗಳಲ್ಲಿ ಉಳುವ ಎತ್ತುಗಳಿಗೆ, ಹಸುಗಳಿಗೆ ಸಿಂಗಾರ ಮಾಡಿಸಿ ಬಳಿಕ ಮನೆಯ ಸ್ತ್ರೀಯರು ಸೇರಿ ಹಟ್ಟಿಯಲ್ಲಿನ ದನಗಳಿಗೆ ಆರತಿ ಬೆಳಗಿ ಶೋಬಾನೆ ಹಾಡುತ್ತಿದ್ದರು. ವಿಶೇಷ ತಿನಿಸುಗಳನ್ನು ನೀಡುತ್ತಿದ್ದರು. ಹಟ್ಟಿ ತುಂಬಾ ದನಗಳಿದ್ದು, ಅವುಗಳ ಪೂಜೆಗೆ ತುಂಬಾ ಸಮಯ ಹಿಡಿಯುತ್ತಿತ್ತು. ಆದರೂ ಸಂಭ್ರಮಕ್ಕೆ ಕೊರತೆ ಎನ್ನುವುದು ಇರಲಿಲ್ಲ. ಆದರೆ ಇಂದು ದನ, ಕರುಗಳು ಮನೆಗಳಲ್ಲಿ ಕ್ಷೀಣಿಸುತ್ತಾ ಹೋಗುತ್ತಿದೆ. ಹಾಗಾಗಿ ಗೋಪೂಜೆ ಅಪರೂಪವಾಗಿ ಕಾಣಿಸುತ್ತಿರುವುದು ಬೇಸರದ ಸಂಗತಿ.
– ಕುಸುಮಾ, ಕೋಡಿಮಜಲು, ಮರ್ಕಂಜ