Advertisement

ದೀಪಾವಳಿ ರೈತರ ಹಬ್ಬವಾಗಿತ್ತು

12:53 PM Oct 21, 2017 | Team Udayavani |

ಮೈಸೂರು: ದೀಪಾವಳಿ ರೈತರ ಹಬ್ಬವಾಗಿತ್ತು. ಬೆಳೆ ಹೆಚ್ಚಲಿ ಎಂದು ರೈತರು ಬದುಗಳ ಮೇಲೆ ದೀಪಹಚ್ಚುತ್ತಿದ್ದರು. ಆದರೆ, ವೈದಿಕರು ಪ್ರಜಾಪೀಡಕನಾಗಿದ್ದ ಬಲಿ ಚಕ್ರವರ್ತಿಯನ್ನು ನಾಶ ಮಾಡಿದ ದಿನ ಎಂದು ಕಥೆ ಕಟ್ಟಿ ನಮ್ಮ ಮೇಲೆ ಹೇರಿದ್ದಾರೆಂದು ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ತಿಳಿಸಿದರು.

Advertisement

ಭಾರತ ಮೂಲ ನಿವಾಸಿಗಳ ಸಂಸ್ಕೃತಿ, ಸಾಹಿತ್ಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ಇದೇ ಮೊದಲ ಬಾರಿಗೆ ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದರು. ಬಲಿ ಚಕ್ರವರ್ತಿ ಅಷ್ಟೇ ಅಲ್ಲ, ಅಸುರ ಸಂಸ್ಕೃತಿಯ ಯಾವುದೇ ರಾಜರೂ ಪ್ರಜಾಪೀಡಕರಾಗಿರಲಿಲ್ಲ. ಅವರೆಲ್ಲರೂ ಶಿವಭಕ್ತರಾಗಿದ್ದರು ಎಂದು ಹೇಳಿದರು.

ದಲಿತರು ಒಂದು ಪರಂಪರೆಯನ್ನು ವಿರೋಧಿಸುತ್ತಾರೆ ಎಂಬ ಮಾತಿದೆ. ಆದರೆ, ದಲಿತರು ಪರಂಪರೆ ವಿರೋಧಿಗಳಲ್ಲ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ನಮ್ಮ ಪೂರ್ವಜರಾದ ಪರಾಕ್ರಮಿಗಳು, ಹೋರಾಟಗಾರರು, ದಾರ್ಶನಿಕರನ್ನು ಸ್ಮರಿಸುವ ಕೆಲಸ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದರು.

ಪುರಾಣ-ಇತಿಹಾಸಕ್ಕೆ ಬಹಳ ವ್ಯತ್ಯಾಸ: ಪುರಾಣದ ಮಿಥ್ಯಗಳನ್ನು ಮುರಿದು ಕಟ್ಟುವ ಕೆಲಸ ಆಗಬೇಕಿದೆ. ಇದಕ್ಕಾಗಿ ಪುರಾಣದೊಳಗಿನ ಇತಿಹಾಸವನ್ನು ಶೋಧಿಸಬೇಕಿದೆ. ಚರಿತ್ರೆಯನ್ನು ಮರು ವ್ಯಾಖ್ಯಾನಿಸಿದಾಗ ವಾಸ್ತವ ಸತ್ಯ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು. 

ಶಿವ ದಕ್ಷಿಣ ಭಾರತೀಯ: ಶಿವ ದಕ್ಷಿಣವನ, ರುದ್ರ ಉತ್ತರದವ. ಇವರಿಬ್ಬರೂ ಆದಿವಾಸಿಗಳ ಮಹಾನ್‌ ನಾಯಕರು. ರಾಮ-ಕೃಷ್ಣ-ಹನುಮಂತ ಕೂಡ ಶಿವ ಭಕ್ತರು. ಶಿವ ಸಂಸ್ಕೃತಿಯೇ ಈ ದೇಶದ ಪ್ರಾಚೀನ ಸಂಸ್ಕೃತಿ ಎಂದ ಅವರು, ತನ್ನ ಸಂಶೋಧನೆ ಪ್ರಕಾರ ಶಿವ ಶ್ರೀಶೈಲದವನು ಎಂದರು. ವೀರಭದ್ರ ಕಾಡು ಕುರುಬ ಜನಾಂಗಕ್ಕೆ ಸೇರಿದವನು. ವೀರಭದ್ರನ ತಂಗಿ ಚೌಡಿಯೇ ಚಾಮುಂಡಿ.

Advertisement

ಇಂತಹ ಚಾಮುಂಡಿ, ಅಸುರ ಕಾಲದ ಮಹಿಷಾಸುರನನ್ನು ಕೊಂದ ಕಥೆಯನ್ನು ವೈದಿಕರು ಸೃಷ್ಟಿಸಿದರು ಎಂದು ಹೇಳಿದರು. ರಾಮಾಯಣ ಮತ್ತು ಮಹಾಭಾರತ ಮಾತ್ರ ಮಹತ್ವದ್ದು ಎಂದು ವೈದಿಕರು ಬಿಂಬಿಸಿದ್ದಾರೆ. ಅದಕ್ಕಿಂತಲೂ ಮಹತ್ವದ ಘಟನೆ ದಕ್ಷಯಜ್ಞ. ದೇಶದ ಮೂಲ ನಿವಾಸಿಗಳೆಲ್ಲಾ ಯಜ್ಞದ ವಿರೋಧಿಗಳಾಗಿದ್ದರಿಂದಲೇ ಕೊಂಡ ತುಳಿಯುತ್ತಿದ್ದರು.

ಆರ್ಯರ ಜತೆಗಿನ ಸಂಘರ್ಷವನ್ನು ತಪ್ಪಿಸಲು ಶಿವ-ದಾûಾಯಿಣಿಯನ್ನು ಮದುವೆಯಾಗುತ್ತಾನೆ. ಇವರಿಗೆ ಹುಟ್ಟಿದವ ಗಣಪತಿ. ಹೀಗಾಗಿ ಗಣಪತಿ, ಪಾರ್ವತಿ ಮಗನಲ್ಲ. ಪಾರ್ವತಿ ಬೇಡರವಳು, ಪರ್ವತರಾಜನ ಮಗಳು. ಹೀಗಾಗಿಯೇ ಯಜ್ಞಗಳಲ್ಲಿ ಶಿವನಿಗೆ ಕೊನೆ ಸ್ಥಾನ. ಗಣಪತಿಗೆ ಮೊದಲ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಉರಿಲಿಂಗಪೆದ್ದಿ ಮಠದ ಜಾnನಪ್ರಕಾಶ ಸ್ವಾಮೀಜಿ, ಈಗ ದೇಶದಲ್ಲಿ ಮೋದಿಯವರನ್ನು ಮತ್ತೂಂದು ಅವತಾರ ಎಂದು ಕರೆಯಲಾಗುತ್ತಿದೆ. ಇಂತಹ ಮೋದಿ, ಶ್ರೀರಾಮ ಒಬ್ಬ ರಾವಣನನ್ನು ಕೊಂದಿದ್ದಾನೆ. ಆದರೆ, ದೇಶದಲ್ಲಿ ಇನ್ನೂ ಹಲವಾರು ರಾವಣರಿದ್ದಾರೆ ಎಂದು ಹೇಳಿರುವುದು ಏನನ್ನು ಸೂಚಿಸುತ್ತದೆ ಎಂಬುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಜಿ ಮೇಯರ್‌ ಪುರುಷೋತ್ತಮ್‌, ವಕೀಲ ಎಚ್‌.ಎಸ್‌.ಮೋಹನ್‌ ಕುಮಾರ್‌, ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ, ಡಾ.ಎಸ್‌.ನರೇಂದ್ರ ಕುಮಾರ್‌ ವಿಚಾರ ಮಂಡಿಸಿದರು. ಪೊ›. ಬಿ.ಪಿ.ಮಹೇಶ್‌ ಚಂದ್ರಗುರು ಅಧ್ಯಕ್ಷತೆ ವಹಿಸಿದ್ದರು.

ಮೆರವಣಿಗೆ: ಇದಕ್ಕೂ ಮುನ್ನ ಅರಮನೆ ಕೋಟೆ ಮಾರಮ್ಮ ದೇವಸ್ಥಾನದ ಆವರಣದಿಂದ ಪುರಭವನದವರೆಗೆ ಬಲಿಚಕ್ರವರ್ತಿ ಭಾವಚಿತ್ರದೊಂದಿಗೆ ಬುದ್ಧ, ಸಾಹು ಮಹಾರಾಜ, ಬಲಿಚಕ್ರವರ್ತಿ, ರಾವಣ, ಅಶೋಕ, ನಾಲ್ವಡಿ ಕೃಷ್ಣರಾಜ ಒಡೆಯರ್‌ ವೇಷಧಾರಿಗಳ ಮೆರವಣಿಗೆ ನಡೆಯಿತು. 

ರಾಜಕೀಯ ಪ್ರೇರಿತ ಸಾಂಸ್ಕೃತಿಕ ರಾಜಕಾರಣ: ವೈದಿಕ ಧರ್ಮ ಪುನರುಜ್ಜೀವನಗೊಂಡಾಗಲೆಲ್ಲಾ ಆಕ್ರಮಣಕಾರಿ ಘಟನೆಗಳು ನಡೆದಿವೆ. ಈಗ ಮತ್ತದೇ ಪರಿಸ್ಥಿತಿ ಎದುರಾಗಿದೆ. ಭಾರತದ ಪರಿಸರ ಹಿಂಸಾಮಯವಾಗಿದೆ.

ಬಹುಜನ, ಬಹು ಸಂಸ್ಕೃತಿ, ಬಹು ಭಾಷೆಯ ದೇಶವನ್ನು ಏಕಧರ್ಮ, ಏಕ ಭಾಷೆ, ಏಕ ಸಂಸ್ಕೃತಿಗೆ ಒಳಪಡಿಸುವ ರಾಜಕೀಯ ಪ್ರೇರಿತ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ. ಹೀಗಾಗಿ ಬಹುಜನರು ಎಚ್ಚೆತ್ತು ಸಂವಿಧಾನ-ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದು ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next