Advertisement

ದೀಪಾವಳಿ ಅಂದು-ಇಂದು; ಅಜ್ಜನ ಮನೆಯಲ್ಲಿನ ಬೆಳಕಿನ ಹಬ್ಬದ ಸುಂದರ ನೆನಪು

01:08 PM Oct 25, 2019 | Nagendra Trasi |

ಕಾಲ ಬದಲಾದಂತೆ ಹಬ್ಬಗಳು ತಮ್ಮ ಮಹತ್ವ ಕಳೆದುಕೊಳ್ಳದಿದ್ದರೂ, ಆಚರಣೆಗಳು ಅಲ್ಪ ಮಟ್ಟಿಗಾದರೂ ಬದಲಾವಣೆ ಕಂಡಿರುತ್ತದೆ. ದೀಪಾವಳಿ ಹಬ್ಬ ಬಾಲ್ಯದಲ್ಲಿ ಒಂದು ರೀತಿಯಿದ್ದು, ಬೆಳೆದಂತೆ ವಿಭಿನ್ನ ಆಚರಣೆ ಜಾರಿಗೆ ಬಂದಿರುತ್ತದೆ.

Advertisement

ದೀಪಾವಳಿ ಅಂದು : ನಮ್ಮದು ನಾಲ್ಕು ಜನರ ಸಣ್ಣ ಕುಟುಂಬ. ಹಬ್ಬಗಳು ಬಂತೆಂದರೆ ಮನೆಯಲ್ಲಿಯೇ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿತ್ತು, ಎಲ್ಲವೂ ಹಿತಮಿತವಾಗಿ. ಆಗೆಲ್ಲ ದೀಪಾವಳಿ ಬಂದಾಗ ಪಟಾಕಿಗಳ ಹುಚ್ಚು. ವಿಧ ವಿಧವಾದ ಪಟಾಕಿಗಳನ್ನು ನಮ್ಮ ಮನೆಯಲ್ಲೇ ಸಿಡಿಸಬೇಕೆಂಬ ಆಸೆ. ಎಲ್ಲಾ ವಿಧವಾದ ಪಟಾಕಿಗಳ ಒಂದು ಸೆಟ್ ಬರುತ್ತಿತ್ತು, ಆಗ ಬೆಲೆ ಕೂಡ ಕಡಿಮೆಯೇ. ಮೂರು ದಿನಗಳ ದೀಪಾವಳಿ ಹಬ್ಬಕ್ಕೆ ಸಮನಾಗಿ ಪ್ರತ್ಯೇಕಿಸಿ, ಸಿಡಿಸಿ ಖುಷಿ ಪಡುತ್ತಿದ್ದೆವು.

ಮಂಗಳೂರು ಸಿಟಿ ಹೊರತುಪಡಿಸಿ, ಉಳಿದ ಕಡೆಗಳಲ್ಲಿ ತೋಟದ ಮಧ್ಯೆ ಮನೆಯೋ, ಅಲ್ಲೊಂದು ಇಲ್ಲೊಂದು ಕಾಣಸಿಗುವ ಮನೆಗಳಲ್ಲಿ, ತಮ್ಮ ತಮ್ಮ ಮನೆಗಳಲ್ಲೇ ಪಟಾಕಿಗಳ ಸದ್ದು ಕೇಳಿಬರುತ್ತಿತ್ತು. ನೆಲ ಚಕ್ರ, ಮಾಲೆ ಪಟಾಕಿ, ಲಕ್ಷ್ಮೀ ಬಾಂಬುಗಳ ಸದ್ದೋ ಸದ್ದು! ಮನೆಗಳನ್ನು ಅಲಂಕರಿಸುವ ಹಣತೆಗಳು, ಗೂಡುದೀಪಗಳು, ತುಳಸಿಕಟ್ಟೆಗಳ ಮೇಲಿಡುವ ಚೆಂದದ ದೀಪಗಳು, ಒಂದೇ ಎರಡೇ!

ರಾಕೆಟ್ ಪಟಾಕಿ ಸಿಡಿಸಿದಾಗ ಇನ್ನೊಬ್ಬರ ಮನೆಯಂಗಳಕ್ಕೋ, ತೋಟಕ್ಕೋ ಹೋಗಿ ಬೀಳುತ್ತಿತ್ತು. ನಾನೆಷ್ಟು ಸುರು ಸುರು ಕಡ್ಡಿ ಹಚ್ಚಿದೆ, ನಿನ್ನದೆಷ್ಟು ಎಂಬಿತ್ಯಾದಿ ಮಕ್ಕಳ ಗಲಾಟೆ, ಹಚ್ಚಿ ಉರಿದ ನಂತರ ಅವುಗಳನ್ನು ರಾಶಿ ಹಾಕಿ ಆಮೇಲೆ ಎಣಿಸುವಿಕೆ. ಆಗೆಲ್ಲ ಫ್ಯಾಮಿಲಿ ಗೆಟ್ ಟುಗೆದರ್ ಸ್ವಲ್ಪ ಕಡಿಮೆಯೇ. ಹೆಚ್ಚೆಂದರೆ ಅಜ್ಜನ ಮನೆಯಲ್ಲಿ ಜೊತೆಯಾಗಿ ಆಚರಿಸಲ್ಪಡುತ್ತಿದ್ದ ಬೆಳಕಿನ ಹಬ್ಬದ ಅನುಭವಗಳು ಮನದಾಳದಲ್ಲಿ ಮನೆಮಾಡಿವೆ.

Advertisement

ದೀಪಾವಳಿ ಇಂದು : ಮದುವೆಯಾಗಿ ಬೆಂಗಳೂರಿಗೆ ಬಂದ ನಂತರ, ಪತಿಯ ಕುಟುಂಬದ ಹಲವಾರು ಸದಸ್ಯರುಗಳಿದ್ದಾರೆ ಇಲ್ಲಿ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಹಬ್ಬದ ಸಡಗರವೇ ಬೇರೆ! ಇರುವ ಅಂಗೈಯಗಲ ಮನೆಯಂಗಳದಲ್ಲಿ ಏನೂ ಮಾಡೋಕೆ ಸಾಧ್ಯವಿಲ್ಲ, ಅದಕ್ಕೆ ಬೀದಿ ಬದಿಗೆ ಬಂದು ದೀಪಗಳನ್ನು, ಪಟಾಕಿಗಳನ್ನು ಹಚ್ಚುತ್ತಾರೆ. ಮನೆಯ ಸದಸ್ಯರುಗಳೆಲ್ಲಾ ಸೇರಿ ಮನೆಯನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ಸಿಂಗರಿಸಿ, ಅವಶ್ಯಕವಾದ ಸಾಮಾನುಗಳನ್ನು ತರಿಸಿಕೊಳ್ಳುತ್ತಾರೆ.

ಹಬ್ಬದ ದಿನಗಳಲ್ಲಿ ತಯಾರಿಸುವ ಅಡುಗೆಗಳ ಪಟ್ಟಿ ತಯಾರಿಕೆ, ಹೊಸ ಧಿರಿಸುಗಳ ಕೊಳ್ಳುವಿಕೆ ಹೀಗೆ ಭರಪೂರದ ಸಿದ್ಧತೆಗಳು. ದೀಪಾವಳಿಯ ಪ್ರತಿಯೊಂದು ದಿನದ ಆಚರಣೆ ಶಾಸ್ತ್ರಬದ್ಧವಾಗಿ ಆಚರಿಸುತ್ತಾರೆ. ಚಿಕ್ಕವರಿದ್ದಾಗಿನ ಪಟಾಕಿಗಳ ಕ್ರೇಜ್ ಸ್ವಲ್ಪ ತಗ್ಗಿದೆ, ರಸ್ತೆಗಳಲ್ಲಿ ಇತರರು ಹಚ್ಚುವುದನ್ನು ನೋಡಿ ತೃಪ್ತಿಗೊಳ್ಳುವುದು. ಯಾವಾಗ ಎಲ್ಲಿ ಏನು ಸಿಡಿಯುತ್ತೋ ಅನ್ನುತ್ತಾ ತುಂಬಾ ಜಾಗರೂಕತೆಯಿಂದ ರಸ್ತೆಗಳಲ್ಲಿ ನಡೆಯಬೇಕು ಇಂತಹ ಮಹಾನಗರಿಗಳಲ್ಲಿ. ಮೊಬೈಲ್ ಫೋನುಗಳ ಬಳಕೆಯಿಂದ ಫೋಟೋ ತೆಗೆಯುವ ಪದ್ಧತಿ ಹೆಚ್ಚಾಗಿಯೇ ಕಾಣಸಿಗುವುದು ಹಬ್ಬದ ದಿನಗಳಲ್ಲಿ. ಹೀಗೆ ಊರಿಂದ ಊರಿಗೆ ಬದಲಾಗುವ ಹಬ್ಬಗಳನ್ನು ನೋಡಿ, ಅನುಭವಿಸಿ, ಸಂತಸದಿ ಕಳೆಯುವ ದಿನಗಳ ಸ್ವಾದವೇ ಆಹ್ಲಾದಕರ.

*ಸುಪ್ರೀತಾ ವೆಂಕಟ್

Advertisement

Udayavani is now on Telegram. Click here to join our channel and stay updated with the latest news.

Next