Advertisement

ಮನೆ-ಮನಗಳಲಿ ದೀಪಾವಳಿ ಸಂಭ್ರಮ

06:25 PM Nov 05, 2021 | Team Udayavani |

ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯ ಅಬ್ಬರ ಜೋರಾಗಿದ್ದು, ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀ ಲಕ್ಷ್ಮೀ ದೇವಿಯ ಪೂಜೆ ನೆರವೇರಿಸಿ ಹಬ್ಬ ಆಚರಿಸಲಾಯಿತು.

Advertisement

ಅಮಾವಾಸ್ಯೆ ಪ್ರಯುಕ್ತ ಅಂಗಡಿ-ಮುಂಗಟ್ಟುಗಳು ಹಾಗೂ ವಿವಿಧ ಕಚೇರಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿದವು. ನಗರದ ಬಹುತೇಕ ಅಂಗಡಿಗಳಲ್ಲಿ ಲಕ್ಷ್ಮೀ ದೇವಿಯ ಪೂಜೆ ಅಮಾವಾಸ್ಯೆಯಂದು ನೆರವೇರಿಸಲಾಯಿತು. ಗ್ಯಾರೇಜ್‌, ಬಟ್ಟೆ ಅಂಗಡಿ, ಸಲೂನ್‌, ಹೊಟೇಲ್‌, ಧಾಬಾ, ರೆಸ್ಟಾರೆಂಟ್‌, ಖಾಸಗಿ ಕಚೇರಿಗಳಲ್ಲಿ ಪೂಜೆ ನಡೆದವು. ಅಮವಾಸ್ಯೆಯ ಶುಭ ಮುಹೂರ್ತದಲ್ಲಿ ಅಂಗಡಿಗಳಲ್ಲಿ ಪೂಜೆ ಸಲ್ಲಿಸಿ ಆದಾಯ, ಉದ್ಯೋಗ ವೃದ್ಧಿ ಆಗಲಿ ಎಂದು ಪ್ರಾರ್ಥಿಸಿದರು.

ದೀಪಾವಳಿ ಹಬ್ಬದ ನಿಮಿತ್ತ ಎಲ್ಲ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದುಕೊಂಡರು. ಎಲ್ಲ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಂಗೋಲಿ ಚಿತ್ತಾರ ಬಿಡಿಸಿ, ಹೂವಿನ ಅಲಂಕಾರ ಮಾಡಲಾಗಿತ್ತು. ದಕ್ಷಿಣ ಕಾಶಿ ಖ್ಯಾತಿಯ ನಗರದ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪರಸ್ಪರರು ಶುಭಾಶಯ ಕೋರಿದರು.

ಕೊರೊನಾ ಹಾವಳಿಯಿಂದ ಕಳೆದ ವರ್ಷ ಸರಳವಾಗಿ ಆಚರಣೆ ಆಗಿದ್ದ ದೀಪಾವಳಿ ಹಬ್ಬ ಈ ಬಾರಿ ಅತ್ಯಂತ ಅದ್ಧೂರಿಯಾಗಿ ಆಚರಣೆ ಆಯಿತು. ಕತ್ತಲೆ ಮರೆಯಾಗಿ ಮನೆ-ಮನಗಳು ಪ್ರಜ್ವಲಿಸಿ ಹಬ್ಬದ ಸಂಭ್ರಮ ಇಮ್ಮಡಿ ಆಗಿತ್ತು. ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂತಸಪಟ್ಟರು. ಮನೆಯಂಗಳದಲ್ಲಿ ಹಣತೆಗಳನ್ನು ಹಚ್ಚಿ ನಮ್ಮ ಬದುಕು ದೀಪದಂತೆ ಬೆಳಗಲಿ ಎಂದು ಪ್ರಾರ್ಥಿಸಿದರು. ಮಕ್ಕಳು,ಯುವಕ-ಯುವತಿಯರು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.

ನಗರದ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಖಡೇ ಬಜಾರ್‌, ರವಿವಾರ ಪೇಟೆ, ಶನಿವಾರ ಖೂಟ್‌, ಕಾಕತಿ ವೇಸ್‌, ಪಾಂಗುಳ ಗಲ್ಲಿ, ಭೇಂಡಿ ಬಜಾರ, ಶಹಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನಜಂಗುಳಿ ಆಗಿತ್ತು. ಜನರು ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ನ. 5ರಂದು ಬಲಿ ಪಾಡ್ಯಮಿಯಂದು ಹೊಸ ವಸ್ತುಗಳ ಖರೀದಿ ಭರಾಟೆ ಹೆಚ್ಚಾಗುತ್ತದೆ. ಈ ಬಾರಿ ಗುರುವಾರವೂ ಚಿನ್ನಾಭರಣ, ವಾಹನಗಳು,
ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

Advertisement

ಹಳೇ ಪಿ.ಬಿ. ರಸ್ತೆ, ಕಾಕತಿವೇಸ್‌ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಬ್ಬು, ಬಾಳೆ ಎಲೆ ಗಿಡ, ಹೂವು ಮಾರಾಟ ಜೋರಾಗಿತ್ತು. ದೀಪಾವಳಿ ಸಂಭ್ರಮದಲ್ಲಿ ಇರುವ ಜನರಿಗೆ ದರ ಪೆಟ್ಟು ನೀಡಿದ್ದು, ಅಗತ್ಯ ವಸ್ತುಗಳ ದರ ಏರಿಕೆ ಆಗಿದ್ದರೂ ಜನ ಹಬ್ಬದ ಸಂಭ್ರಮದಲ್ಲಿ ಇರುವುದರಿಂದ ಖರೀದಿಯಲ್ಲಿ ತೊಡಗಿದ್ದಾರೆ. ಹೂವಿನ ದರ ಹೆಚ್ಚಾಗಿದ್ದು, ಜನರು ಚೌಕಾಶಿ ಮಾಡಿ ಖರೀದಿಸುತ್ತಿದ್ದಾರೆ. ದರ ಏರಿಕೆ ಮಧ್ಯೆಯೂ ಹಣತೆಗಳು, ಆಕಾಶಬುಟ್ಟಿಗಳು, ರಂಗೋಲಿ ಹಾಗೂ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸಿದರು,

ಮಣ್ಣಿನ ಹಣತೆಗಳಿಗೆ ಭಾರೀ ಡಿಮ್ಯಾಂಡ್‌
ದೀಪಾವಳಿ ಹಬ್ಬಕ್ಕೆ ಮೇಡ್‌ ಇನ್‌ ಚೀನಾದ ಹಣತೆಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು. ಆದರೆ ಕೆಲ ವರ್ಷಗಳಿಂದ ಮಣ್ಣಿನ ಹಣತೆಗಳಿಗೆ ಭಾರೀ ಬೇಡಿಕೆ ಬಂದಿದೆ. ಇದರಿಂದ ಕುಂಬಾರಿಕೆ ಉದ್ಯೋಗದಲ್ಲಿ ಇದ್ದವರು ಸಂತಸದಲ್ಲಿದ್ದಾರೆ. ರಸ್ತೆ ಬದಿ ಕುಳಿತುಕೊಂಡು ಮಾರಾಟ ಮಾಡುವ ಮಣ್ಣಿನ ಹಣತೆಗಳನ್ನು ಜನರು ಖರೀದಿಸುವಲ್ಲಿ ಉತ್ಸಾಹ ತೋರುತ್ತಿದ್ದಾರೆ.

ವಾಹನ ಸಂಚಾರ ದಟ್ಟಣೆಯಿಂದ ಕಿರಿಕಿರಿ
ನಗರದ ಬಹುತೇಕ ಕಡೆಗಳಲ್ಲಿ ವಾಹನ ದಟ್ಟಣೆ ಆಗಿತ್ತು. ವಾಹನ ಸವಾರರು ಸಂಚಾರ ದಟ್ಟಣೆಯಿಂದಾಗಿ ಪರದಾಡುವಂತಾಯಿತು. ಅನೇಕ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ಕಲ್ಪಿಸಿದ್ದರು. ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬೋಗಾರ್‌ ವೇಸ್‌,ಕಿರ್ಲೋಸ್ಕರ್‌ ರೋಡ್‌ ಬಳಿ ಬ್ಯಾರಿಕೇಡ್‌ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next