ದೀಪಾವಳಿ ಬರೀ ಹಬ್ಬವಲ್ಲ ಬದಲಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕ. ಈ ದೀಪಾವಳಿ ಎಂಬುವುದು ಬಡವ -ಬಲ್ಲಿದ, ಮೇಲು -ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಖುಷಿಯಿಂದ ಆಚರಿಸುವ ಹಬ್ಬ. ದೀಪಾವಳಿ ಅಂದರೆ ನೆನಪಿನ ಮೆರವಣಿಗೆ. ಸಾಲು ಸಾಲು ದೀಪಗಳೊಂದಿಗೆ ಬಾಲ್ಯದ ಬಹಳಷ್ಟು ನೆನಪಿನ ಸರಮಾಲೆಗಳು ಕಣ್ಮುಂದೆ ಒಮ್ಮೆ ಮಿಂಚಿ ಸಾಗುತ್ತವೆ.
ಚಿಕ್ಕವರಿದ್ದಾಗ ಹಬ್ಬದ ನಾಲ್ಕು ದಿನ ಮುಂಚೆಯೇ ನಮ್ಮ ಮನೆಯಲ್ಲಿ ತಯಾರಿ ಶುರುವಾಗುತ್ತಿತ್ತು. ನವರಾತ್ರಿ ಮುಗಿದ ಸ್ವಲ್ಪ ದಿನದಲ್ಲೇ ದೀಪಾವಳಿ ಹಬ್ಬ ಬರುವ ಕಾರಣ ಹಬ್ಬದ ಕಳೆ ಹಾಗೆಯೇ ಉಳಿದಿರುತ್ತಿತ್ತು. ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಉಳಿದಿದೆ ಎಂದಾಗ ಅಪ್ಪನನ್ನು ಕಾಡಿಸಿ ಪೀಡಿಸಿ ಅಕ್ಕಂದಿರ ಜೊತೆ ಸೇರಿ ಪೇಟೆಗೆ ಹೋಗುತ್ತಿದ್ದೇವು. ಪೇಟೆಗೆ ಹೋದರೆ ಸಾಕು ಒಂದೇ ಎರಡೇ.. ನಮ್ಮ ಬಯಕೆಗಳ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿತ್ತು. ತಂದೆ ಏನು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ; ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದರು. ಹೀಗೆ ಹೊಸಬಟ್ಟೆ, ಲಡ್ಡು, ಮಿಠಾಯಿ, ಪಟಾಕಿಗಳನ್ನು ತರುತ್ತಿದ್ದೆವು. ದೀಪಾವಳಿಯ ಮೊದಲ ದಿನ ಪೇಟೆಯಿಂದ ತಂದ ಲಡ್ಡು ಮಿಠಾಯಿಗಳು ಅರ್ಧ ಖಾಲಿಯಾಗುತ್ತಿತ್ತು.
ದೀಪಾವಳಿಯ ಮೊದಲ ದಿನವೇ ನರಕ ಚತುರ್ದಶಿ. ಅಂದು ಅಮ್ಮ ಎಣ್ಣೆ ಸ್ನಾನ ಮಾಡಲು ಮುಂಜಾನೆಯೇ ಬೇಗನೇ ಎಬ್ಬಿಸುತ್ತಿದ್ದಳು. ಅಜ್ಜಿಯ ಬಳಿ ಎಣ್ಣೆ ಹಚ್ಚಿಸಿಕೊಳ್ಳಲು ಸಾಲಾಗಿ ಕುಳಿತುಕೊಳುತ್ತಿದ್ದ ನಮಗೆ ಅಜ್ಜಿ ಎಣ್ಣೆ ಹಚ್ಚುತ್ತಾ ನರಕಾಸುರನ ಕಥೆ ಹೇಳುತ್ತಿದ್ದರು. ಜೊತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕು, ಒಳ್ಳೆತನವನ್ನೇ ಮೈಗೂಡಿಸಿಕೊಳ್ಳಬೇಕು, ಜೀವನದಲ್ಲಿ ಒಳ್ಳೆಯದಕ್ಕೆ ಜಯ ದೊರೆದೇ ತೀರುತ್ತದೆ ಎಂಬ ಜೀವನ ಪಾಠಗಳನ್ನೂ ಹೇಳುತ್ತಿದ್ದರು. ಅಜ್ಜಿ ಎಣ್ಣೆ ಹಚ್ಚುತ್ತಿದ್ದುದನ್ನು ನೆನೆಸಿಕೊಂಡರೆ “ಅಜ್ಜಯ್ಯನ ಅಭ್ಯಂಜನ ”ಪಾಠವೇ ನೆನಪಾಗುತ್ತದೆ. ಯಾಕಜ್ಜಿ ಇಷ್ಟೊಂದು ಎಣ್ಣೆ ಹಚ್ಚುತ್ತಿದ್ದೀಯ ಅಂದ್ರೆ ಅದಕ್ಕೊಂದು ಕಥೆ ಹೇಳುತ್ತಿದ್ದಳು. ನರಕಾಸುರನನ್ನು ವಧಿಸುವಾಗ ಅಲ್ಲಿದ್ದ ಮಕ್ಕಳ ಮೇಲೆಲ್ಲಾ ರಕ್ತದ ಕಲೆಗಳು ಅಂಟಿದ್ದವಂತೆ. ಅದನ್ನು ತೆಗೆಯಲು ಎಣ್ಣೆ ಹಚ್ಚಿ ಸ್ನಾನ ಮಾಡುವುದಂತೆ. ಹೀಗೆ ಕಥೆಯ ಜೊತೆಗೆ ಸ್ನಾನವೂ ಆಗುತ್ತಿತ್ತು. ಮೈಯೊಂದಿಗೆ ಮನಸ್ಸು ಶುಭ್ರವಾಗುತ್ತಿತ್ತು.
ಎಣ್ಣೆ ಸ್ನಾನದ ಬಳಿಕ ಅಡುಗೆ ಕೋಣೆಗೆ ಹೋಗುತ್ತಿದ್ದ ನಮಗೆ ಅಮ್ಮ ದೋಸೆಗೆ ತುಪ್ಪ ಹಾಕಿ ಬೆಲ್ಲ ಹಾಗೂ ಕಾಯಿ ಹೂರಣ ಮಾಡಿಕೊಡುತ್ತಿದ್ದಳು. ಅದನ್ನು ಎಲ್ಲರೂ ಕುಳಿತು ಸಂತೋಷದಿಂದ ಸವಿಯುತ್ತಿದ್ದೆವು. ಅಮ್ಮನ ಆ ಕೈ ರುಚಿಗೆ ಸರಿಸಾಟಿ ಬೇರೊಂದಿಲ್ಲ. ಆದರೆ ಹಬ್ಬದ ದಿನದ ಅಡುಗೆ ತುಪ್ಪದ ಜತೆಗೆ ಹೋಳಿಗೆ ಮೆಲ್ಲಿದಂತೆ. ರುಚಿಯ ತೂಕ ತುಸು ಹೆಚ್ಚೇ.
ಹೀಗೆ ಇಡೀ ದಿನ ಅಕ್ಕಪಕ್ಕದ ಮನೆಯವರ ಜೊತೆ ಆಟವಾಡುತ್ತಲೇ ಸಮಯ ಕಳೆಯುತ್ತಿದ್ದೆವು. ಇನ್ನು ಸಂಜೆಯಾದರೆ ಸಾಕು ಎಲ್ಲರ ಮನೆಯಲ್ಲಿ ರಂಗೋಲಿ ಹಾಕಿ ಮಣ್ಣಿನ ದೀಪಗಳನ್ನು ಹಚ್ಚುತ್ತಿದ್ದರು.
ದೀಪಾವಳಿಯ ಮೂರನೇ ದಿನ ಮನೆಯಲ್ಲಿ ಸಾಕುತ್ತಿದ್ದ ಗೋವುಗಳಿಗೆ ಪೂಜೆ ಮಾಡುತ್ತಿದ್ದೆವು. ಮಧ್ಯಾಹ್ನ ನಂತರ ಮನೆಯ ಗೋವುಗಳನ್ನೆಲ್ಲಾ ಸ್ನಾನ ಮಾಡಿಸಿ, ಮನೆಯಲ್ಲೇ ತಯಾರಿಸಿದ ಹೂವಿನ ಮಾಲೆಯನ್ನು ಕೊರಳಿಗೆ ಹಾಕುತ್ತಿದ್ದೆವು. ರಾತ್ರಿ ಕಡುಬನ್ನು ತಯಾರಿಸಿ ಬೆಲ್ಲದ ಜೊತೆ ಗೋವಿಗೆ ಕೊಟ್ಟು ಗೋಮಾತೆಗೆ ಪೂಜೆ ಮಾಡುತ್ತಿದ್ದೆವು.
ದೀಪಾವಳಿಗೆ ಎಲ್ಲರ ಮನೆಯಲ್ಲೂ ಪಟಾಕಿ ಸದ್ದು. ಆ ದೊಡ್ಡ ಸದ್ದಿಗೆ ಹೆದರಿ ಅಮ್ಮನ ಸೆರಗಿನೆಡೆಯಲ್ಲಿ ಅವಿತು ಕುಳಿತು ಕೊಳ್ಳುತ್ತಿದ್ದೆವು. ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದ ಆ ಕ್ಷಣ,ಅಮ್ಮ ತಯಾರಿಸಿದ ತಿಂಡಿಗಾಗಿ ಅಕ್ಕಂದಿರ ಜೊತೆ ಆಡುತ್ತಿದ್ದ ಜಗಳ, ಗೋಮಾತೆಗೆ ಪೂಜೆಗಾಗಿ ಹೂಗಳನ್ನು ಸಂಗ್ರಹಿಸಿ ಉದ್ದನೆಯ ಮಾಲೆ ಮಾಡಿ, ಅಜ್ಜಿಯ ಬಳಿ ತೋರಿಸಿ ‘ಇದು ನಾನು ಹೆಣೆದ ಮಾಲೆ’ ಎನ್ನುತ್ತಾ ಸಂತಸ ಪಡುತ್ತಿದ್ದ ಆ ಸುಂದರ ಘಳಿಗೆ, ಗೆಳತಿಯರೊಡನೆ ಪಿಸ್ತೂಲ್ ಹಿಡಿದು ಅದಕ್ಕೆ ಪಟಾಕಿ ತುಂಬಿಸಿ ಕಳ್ಳ ಪೊಲೀಸ್ ಆಟ ಆಡುತ್ತಿದ್ದ ಆ ಅದ್ಭುತ ಕ್ಷಣಗಳು ಮರೆಯಲಾಗದ್ದು.
ಈಗಲೂ ಪ್ರತಿ ವರ್ಷ ದೀಪಾವಳಿ ಹಬ್ಬ ಬರುತ್ತದೆ. ನಾವು ಸಂಪ್ರದಾಯದಂತೆ ಆಚರಣೆ ಮಾಡುತ್ತೇವೆ. ಗೋಪೂಜೆ ಸಹಿತ ಪೂಜೆಗಳು ನಡೆಯುತ್ತದೆ. ಆದರೆ ವರ್ಷ ಕಳೆದಂತೆ ಖುಷಿ ಕಡಿಮೆಯಾಗುತ್ತಿದೆ. ನಮ್ಮ ಬಾಲ್ಯದ ಮುಗ್ಧತೆ ಮರೆಯಾದಂತೆ ನಮ್ಮ ಮನೆಯಂಗಳದಲ್ಲಿ ಸಿಡಿಯುವ ಪಟಾಕಿಯ ಶಬ್ದವೂ ಕಡಿಮೆಯಾಗುತ್ತಿದೆ.
ಲಾವಣ್ಯ. ಎಸ್.
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು