Advertisement

ಉಪನ್ಯಾಸಕರಿಗೆ ದೀಪಾವಳಿ ಬೋನಸ್‌

06:00 AM Oct 12, 2017 | Team Udayavani |

ಹೊಸದಿಲ್ಲಿ: ಕಾಲೇಜು ಉಪನ್ಯಾಸಕರು ಮತ್ತು ಪ್ರಾಧ್ಯಾಪಕರಿಗೆ ಪ್ರಸಕ್ತ ಸಾಲಿನ ದೀಪಾವಳಿ ನಿಜಕ್ಕೂ ಖುಷಿ ಕೊಡಲಿದೆ. ದೇಶದ ರಾಜ್ಯ, ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ವಿವಿಗಳಲ್ಲಿನ ಸುಮಾರು 7.5 ಲಕ್ಷ ಉಪನ್ಯಾಸಕರಿಗೆ ಶೇ. 22ರಿಂದ 28ರಷ್ಟು ವೇತನ ಹೆಚ್ಚಿಸುವ ಪ್ರಸ್ತಾವದ ಬಗ್ಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಹೀಗಾಗಿ, ಅವರ‌ ವೇತನ 10 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳ ವರೆಗೆ ಏರಿಕೆಯಾಗಲಿದೆ.

Advertisement

ಈ ನಿರ್ಧಾರ 2016ರ ಜ.1 ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಕೇಂದ್ರ ಸಂಪುಟ ಸಭೆಯ ಬಳಿಕ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾಬ್ಡೇಕರ್‌ ತಿಳಿಸಿದ್ದಾರೆ. ಆಯಾ ವಿಭಾಗಗಳಲ್ಲಿರುವ ಉಪನ್ಯಾಸ ಕರ ಸೇವಾವಧಿಯನ್ನು ಪರಿಗಣಿಸಿ ನಿಯಮ ಜಾರಿಯಾಗಲಿದೆ. ಯಾವುದೇ ವಿಭಾಗದಲ್ಲಿರುವ ಹಿರಿಯ ಪ್ರಾಧ್ಯಾಪಕರಿಗೆ ಗರಿಷ್ಠ ವೆಂದರೆ 50 ಸಾವಿರ ರೂ.ಗಳಷ್ಟು ವೇತನ ಏರಿಕೆಯಾಗಲಿದೆ. ಅಲ್ಲದೆ, 10 ಸಾವಿರ ರೂ. ಏರಿಕೆಯಾದರೂ ಉಪನ್ಯಾಸಕರಿಗೆ ಎರಿಯರ್ಸ್‌ ರೂಪದಲ್ಲೇ ಅಂದಾಜು 2 ಲಕ್ಷ ರೂ. ಹೆಚ್ಚುವರಿಯಾಗಿ ಸಿಗಲಿದೆ. ಕೇಂದ್ರ ಸರಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸುಗಳ ಮಾದರಿಯಲ್ಲೇ ಇಲ್ಲೂ ವೇತನ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಸಂಪುಟದ ನಿರ್ಧಾರ 43 ಕೇಂದ್ರೀಯ ವಿವಿಗಳು, 329 ರಾಜ್ಯ ವಿವಿಗಳು, ಜತೆಗೆ 12,912 ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಿಗೆ ಅನ್ವಯವಾಗಲಿದೆ. ಜತೆಗೆ ಐಐಎಂಗಳು, ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌,  ಐಐಐಟಿಗಳು, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಸಂಸ್ಥೆಗಳಿಗೂ ಅನ್ವಯವಾಗಲಿದೆ.

2006ರ ಬಳಿಕ ಕಾಲೇಜು ಉಪನ್ಯಾಸಕ/ಪ್ರಾಧ್ಯಾಪಕರಿಗೆ ವೇತನ ಪರಿಷ್ಕರಣೆ ಮಾಡಿರಲಿಲ್ಲ.

ಯಾರಿಗೆ ಅನ್ವಯ?
– 43 ಕೇಂದ್ರೀಯ ವಿವಿಗಳು
– 329ವಿವಿಧ ರಾಜ್ಯ ಸರಕಾರಗಳ ಅಧೀನದಲ್ಲಿರುವ ವಿವಿಗಳು 
– 12,912 ಸರಕಾರಿ, ಅನುದಾನಿತ ಕಾಲೇಜುಗಳ ಪ್ರಾಧ್ಯಾಪ ಕರು/ಉಪನ್ಯಾಸಕರು
– 22 28 ಶೇಕಡಾವಾರು ಸಂಬಳ ಹೆಚ್ಚಳದ ಪ್ರಮಾಣ
– 10,000ದಿಂದ – 50,000ರೂ.  ನಗದು ರೂಪದಲ್ಲಿ  ಆಗುವ ಹೆಚ್ಚಳ

Advertisement
Advertisement

Udayavani is now on Telegram. Click here to join our channel and stay updated with the latest news.

Next