Advertisement

ಮಹಾಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ

10:13 PM Oct 28, 2019 | mahesh |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರವಿವಾರ ರಾತ್ರಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ದೇವರ ಬಲಿ ಉತ್ಸವ, ಬಲಿ ಯೇಂದ್ರ ಪೂಜೆಯ ಸಾಂಪ್ರ ದಾಯಿಕ ಆಚರಣೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

Advertisement

ಪತ್ತನಾಜೆ ಸಂದರ್ಭದಲ್ಲಿ ಉತ್ಸವಾದಿ ಗಳಿಗೆ ಪೂರ್ಣ ವಿರಾಮ ಕಂಡ ದೇವರ ಬಲಿ ಉತ್ಸವ ಮತ್ತೆ ದೀಪಾವಳಿಯ ಸಂದರ್ಭದಲ್ಲಿ ಆರಂಭಗೊಳ್ಳುವುದು ಸಂಪ್ರದಾಯ. ಈ ಬಲಿ ಉತ್ಸವದೊಂದಿಗೆ ಸೀಮೆಯ ಉತ್ಸವಗಳಿಗೆ ಚಾಲನೆ ನೀಡಿದಂತಾಯಿತು.

ಈ ಬಾರಿ ಅಮಾವಾಸ್ಯೆಯ ದಿನ ಸಂಜೆ ಅಮಾವಾಸ್ಯೆಯ ಘಳಿಗೆ ಇರದ ಕಾರಣ ನರಕ ಚತುರ್ದಶಿಯಂದು ಸಂಜೆ ಶ್ರೀ ದೇವರ ಉತ್ಸವ ಹೊರಡುವುದು ವಿಶೇಷತೆಯಾಯಿತು. ಸಂಜೆ 7.30ರ ಅನಂತರ ಸಂಪ್ರದಾಯದಂತೆ ದೇವರ ನಡೆಯಲ್ಲಿ ಪ್ರಾರ್ಥನೆಯ ಬಳಿಕ ಗರ್ಭಗುಡಿ, ಗೋಪುರ, ಗುಡಿಗಳ ಸುತ್ತಲೂ ಹಣತೆಯನ್ನು ಉರಿ ಸಲಾಯಿತು. ಪೂಜೆಯ ಅನಂತರ ದೇವರ ಬಲಿ ಹೊರಟು ಉತ್ಸವ, ಧ್ವಜ ಸ್ತಂಭದ ಬಳಿ ಬಲಿ ಯೇಂದ್ರ ಪೂಜೆ ನಡೆಯಿತು.

ಅವಲಕ್ಕಿ ಸಮರ್ಪಣೆ
ಪೂರ್ವಶಿಷ್ಟ ಸಂಪ್ರದಾಯದಂತೆ ಬಲಿಯೇಂದ್ರ ಮರದ ಬುಡಕ್ಕೆ ಅವಲಕ್ಕಿ ಸಮರ್ಪಣೆ ಮಾಡಲಾಯಿತು. ವಸಂತಕಟ್ಟೆಯಲ್ಲಿ ಭಕ್ತರಿಗೆ ದೀಪಾವಳಿ ಪ್ರಸಾದವಾಗಿ ಅವಲಕ್ಕಿ, ತೆಂಗಿನಕಾಯಿ ಪ್ರಸಾದ ವಿತರಿಸಲಾಯಿತು. ಭಕ್ತರು ದೇವಾಲಯದ ಒಳಾಂಗಣದ ಸುತ್ತಲೂ ಹಣತೆ ಹಚ್ಚಿ ದೀಪಾವಳಿ ಆಚರಿಸಿದರು.

ದೇಗುಲದ ಕಾರ್ಯ ನಿರ್ವಹಣಾ ಧಿಕಾರಿ ನವೀನ್‌ ಭಂಡಾರಿ, ನಗರಸಭಾ ಸದಸ್ಯರಾದ ವಾಸ್ತು ಎಂಜಿನಿಯರ್‌ ಪಿ.ಜಿ.ಜಗನ್ನಿವಾಸ ರಾವ್‌, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎನ್‌. ಸುಧಾಕರ್‌ ಶೆಟ್ಟಿ, ಸಮಿತಿ ಮಾಜಿ ಸದಸ್ಯರಾದ ಯು.ಪಿ. ರಾಮಕೃಷ್ಣ, ಎನ್‌. ಕರುಣಾಕರ ರೈ, ಮಾಜಿ ಮೊಕ್ತೇಸರ ರಮೇಶ್‌ ಬಾಬು, ರಾಜ್ಯ ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಎನ್‌.ಕೆ. ಜಗನ್ನಿವಾಸ ರಾವ್‌, ಯು. ಲೋಕೇಶ್‌ ಹೆಗ್ಡೆ, ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು.

Advertisement

ತಂಬಿಲ ಸೇವೆ
ದೇವಾಲಯದಲ್ಲಿ ಸಾನ್ನಿಧ್ಯ ಪಡೆ ದಿರುವ ಶ್ರೀ ರಕ್ತೇಶ್ವರಿ, ಅಂಜಣ ತ್ತಾಯ, ಶ್ರೀ ಹುಲಿಭೂತಗಳಿಗೆ ತಂಬಿಲ ಸೇವೆಯು ದೇವರ ಬಲಿ ಉತ್ಸವ ಆರಂಭಗೊಂಡ ಅನಂತರದಲ್ಲಿ ನಡೆಯುತ್ತದೆ.

ಉತ್ಸವ ಆರಂಭ
ಸೀಮೆಯ ದೇವಾಲಯ ಮತ್ತು ದೈವಸ್ಥಾನಗಳಲ್ಲಿ ಉತ್ಸವ ಆರಂಭವಾದ ಬಳಿಕ ಕಾಲಾವಧಿ, ವರ್ಷಾವಧಿ, ಹರಕೆಯ, ನೇಮ, ಆಯನ, ಕೋಲ, ತಂಬಿಲಾದಿಗಳು ನಡೆಯುತ್ತವೆ. ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಹೊರಡದೆ ಸೀಮೆಯ ದೇವ ಮತ್ತು ದೈವಸ್ಥಾನಗಳಲ್ಲಿ ಜಾತ್ರೆ, ಉತ್ಸವ ನಡೆಯುವುದಿಲ್ಲ ಎಂಬುದು ಸೀಮೆಯ ಸಂಪ್ರದಾಯ.

Advertisement

Udayavani is now on Telegram. Click here to join our channel and stay updated with the latest news.

Next