ಹೊಸದಿಲ್ಲಿ: ಕ್ರೀಡಾಲೋಕದ ತಾರಾ ಜೋಡಿಗಳಾದ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕುರಿತು ಮತ್ತೆ ಊಹಾಪೋಹಗಳು ಹರಿದಾಡಲು ಶುರುವಾಗಿದ್ದು, ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಕಳೆದೊಂದು ವರ್ಷದಿಂದ ದಂಪತಿಗಳ ವಿಚ್ಛೇದನದ ಬಗ್ಗೆ ವದಂತಿಗಳು ಹರಿದಾಡುತ್ತಿವೆ ಆದರೆ ಇಬ್ಬರು ಕ್ರೀಡಾ ತಾರೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿರುವ ಕುರಿತು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೀಡಿಲ್ಲ.
2010 ರಲ್ಲಿ ವಿವಾಹವಾಗಿದ್ದ ಸಾನಿಯಾ ಮತ್ತು ಶೋಯೆಬ್ ಅವರ ಕುರಿತು ಉಭಯ ದೇಶಗಳ ಅಭಿಮಾನಿಗಳಲ್ಲಿ ಭಾರಿ ಆಸಕ್ತಿಯನ್ನು ಹುಟ್ಟುಹಾಕಿತ್ತು ಮತ್ತು ಅವರ ಪ್ರತ್ಯೇಕತೆಯ ಊಹಾಪೋಹವೂ ಕೂಡ ಈಗ ಕುತೂಹಲ ಕೆರಳಿಸಿದೆ.
ವಿಚ್ಛೇದನದ ಸುತ್ತ ಹುರುಳಿಲ್ಲದಿದ್ದರೂ, ಇಬ್ಬರು ಕ್ರೀಡಾಪಟುಗಳು ಪಾಕಿಸ್ತಾನಿ ರಿಯಾಲಿಟಿ ಟಿವಿ ಶೋ – ದಿ ಮಿರ್ಜಾ ಮಲಿಕ್ ಶೋಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ದಂಪತಿಗಳಿಗೆ ಇಜಾನ್ ಮಲಿಕ್ ಎಂಬ ಮಗನಿದ್ದಾನೆ, ಆತ 2018 ಅಕ್ಟೋಬರ್ ನಲ್ಲಿ ಜನಿಸಿದ್ದ.
ಶುಕ್ರವಾರ,41 ವರ್ಷದ ಪಾಕಿಸ್ತಾನಿ ಆಲ್‌ರೌಂಡರ್ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಸಾನಿಯಾ ಮಿರ್ಜಾ ಅವರ ಉಲ್ಲೇಖವನ್ನು ತೆಗೆದುಹಾಕಿದ್ದು, ಅವರ ಸಂಬಂಧದ ಸ್ಥಿತಿ ಮತ್ತೊಮ್ಮೆ ತೀವ್ರ ಚರ್ಚೆಯ ವಿಷಯವಾಗಿದೆ. ಇನ್‌ಸ್ಟಾಗ್ರಾಮ್ ಬಯೋದಿಂದ ‘ ಸೂಪರ್ ವುಮನ್ ಸಾನಿಯಾ ಮಿರ್ಜಾ’ ಉಲ್ಲೇಖವನ್ನು ತೆಗೆದುಹಾಕಿದ್ದಾರೆ, ಇದು ಅಭಿಮಾನಿಗಳ ಪ್ರತಿಕ್ರಿಯೆಗಳನ್ನು ಪ್ರಚೋದಿಸಿದೆ.
ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ ಪ್ರದರ್ಶನ ಪಂದ್ಯವನ್ನು ಆಡುವ ಮೂಲಕ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿರುವ 36 ವರ್ಷದ ಸಾನಿಯಾ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮಲಿಕ್ ಅವರ ಚಿತ್ರಗಳನ್ನು ಸಹ ಅಳಿಸಿದ್ದಾರೆ.
“ಸಾನಿಯಾ ಮತ್ತು ಶೋಯೆಬ್ ಇಬ್ಬರೂ ತಮ್ಮ ವೈಯಕ್ತಿಕ ಜೀವನವಾಗಿರುವುದರಿಂದ, ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಲು ಬಯಸುವುದಿಲ್ಲ. ಅವರ ಗೌಪ್ಯತೆಯನ್ನು ಗೌರವಿಸಿದರೆ ನಾವು ಪ್ರಶಂಸಿಸುತ್ತೇವೆ,ಅವರ ಆದ್ಯತೆ ಅವರ ಮಗ ಇಜಾನ್ ”ಎಂದು ಕುಟುಂಬದ ಮೂಲವೊಂದು ಹೇಳಿದೆ.