ನವದೆಹಲಿ: ಕಳೆದ ಮಾರ್ಚ್ ನಲ್ಲಿ ಫೇಸ್ ಬುಕ್ ಗೆಳೆಯನನ್ನು ವಿವಾಹವಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಮಹಿಳೆ ಅಂಜು ಅಲಿಯಾಸ್ ಫಾತಿಮಾ ಐದು ತಿಂಗಳ ಬಳಿಕ ಭಾರತಕ್ಕೆ ವಾಪಸ್ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ
ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿರುವ ಅಂಜುವನ್ನು ಐಬಿ ಮತ್ತು ಪಂಜಾಬ್ ಗುಪ್ತಚರ ಇಲಾಖೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಂಜು ತಾನು ಭಾರತದಲ್ಲಿರುವ ಪತಿ ಅರವಿಂದ್ ಗೆ ವಿಚ್ಛೇದನ ನೀಡಿ, ತನ್ನಿಬ್ಬರು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲು ಭಾರತಕ್ಕೆ ಬಂದಿರುವುದಾಗಿ ತಿಳಿಸಿದ್ದಾಳೆ.
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ನಸ್ರುಲ್ಲಾ ಎಂಬಾತನನ್ನು ವಿವಾಹವಾಗುವ ನಿಟ್ಟಿನಲ್ಲಿ ಅಂಜು ಪಾಕಿಸ್ತಾನದ ಖೈಬರ್ ಫಖ್ತುಂಕ್ವಾಕ್ಕೆ ತೆರಳಿದ್ದಳು. ಅಲ್ಲಿ ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಅಂಜು ಫಾತಿಮಾ ಎಂದು ಹೆಸರನ್ನು ಬದಲಾಯಿಸಿಕೊಂಡು ನಸ್ರುಲ್ಲಾನನ್ನು ವಿವಾಹವಾಗಿದ್ದಳು.
ವಿಚಾರಣೆ ವೇಳೆ ಪಾಕ್ ಪ್ರಜೆ ನಸ್ರುಲ್ಲಾ ಜತೆ ವಿವಾಹವಾಗಿರುವುದಕ್ಕೆ ಯಾವುದೇ ಸಾಕ್ಷ್ಯವನ್ನು ಅಂಜು ನೀಡಿಲ್ಲ. ಅಲ್ಲದೇ ತನಗೆ ಪಾಕ್ ನ ಸೇನಾಪಡೆಯ ಜತೆ ಯಾವುದೇ ಸಂಪರ್ಕ ಇಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಅಂಜು ಅಳ್ವಾರ್ ನಿವಾಸಿಯಾಗಿದ್ದು, ಭಿವಾಡಿಯಲ್ಲಿ ಪತಿ ಅರವಿಂದ್ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದಳು. ಪಾಕಿಸ್ತಾನಕ್ಕೆ ತೆರಳಿ ಅಂಜು ನಸ್ರುಲ್ಲಾನನ್ನು ವಿವಾಹವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋ ವೈರಲ್ ಆಗಿತ್ತು.
ಬುಧವಾರ ಸಂಜೆ ವಿಚಾರಣೆ ಬಳಿಕ ಅಂಜುಗೆ ನವದೆಹಲಿಗೆ ತೆರಳಲು ಪೊಲೀಸರು ಅನುಮತಿ ನೀಡಿದ್ದು, ಆಕೆ ಭಿವಾಡಿಗೆ ತೆರಳಿರುವ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ವರದಿ ತಿಳಿಸಿದೆ.