ಬೆಂಗಳೂರು: ದೇಶದ ‘ಐಟಿ ಹಬ್’ ಎಂಬ ಹಿರಿಮೆ ಹೊಂದಿರುವ ಬೆಂಗಳೂರಿನಲ್ಲಿ ವೈವಾಹಿಕ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಕಳೆದ ನಾಲ್ಕೇ ತಿಂಗಳಲ್ಲಿ 2,300ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಅಚ್ಚರಿ ಎಂದರೆ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಐಟಿ – ಬಿಟಿ ವಲಯದ್ದೇ ಹೆಚ್ಚು. ವೈವಾಹಿಕ ಜೀವನಕ್ಕೆ ಕಾಲಿಟ್ಟ 6 ತಿಂಗಳು, 1 ವರ್ಷ, 2 ವರ್ಷದೊಳಗೆ ವಿವಾಹ ಬಂಧನ ಕಡಿದುಕೊಳ್ಳಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಮತ್ತೂಂದು ಸಂಗತಿ ಎಂದರೆ ಇಡೀ ಭಾರತದಲ್ಲಿ ಅತಿ ಹೆಚ್ಚು ವಿಚ್ಛೇದನ ಕೋರುವ ಟಾಪ್ ಐದು ನಗರಗಳಲ್ಲಿ ಬೆಂಗಳೂರು ಸಹ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನ ಕೋರಿ ಪ್ರತಿ ನಿತ್ಯ 25ರಿಂದ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. 2015ರಲ್ಲಿ ಒಟ್ಟು 5,300 ಹಾಗೂ 2016ರಲ್ಲಿ ಸರಾಸರಿ 5,500 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಾರಿ ನಾಲ್ಕೇ ತಿಂಗಳಲ್ಲಿ 2,300ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಈ ವರ್ಷಾಂತ್ಯಕ್ಕೆ ಸುಮಾರು 7,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಕೌಟುಂಬಿಕ ನ್ಯಾಯಾಲಯದ ಅಧಿಕಾರಿಗಳು.
ವಿವಾಹ ಬಂಧನಕ್ಕೊಳಗಾದ ಒಂದೆರಡು ವರ್ಷಗಳ ಅಂತರದಲ್ಲೇ ವೈಯಕ್ತಿಕ ಕಾರಣ, ಕೌಟುಂಬಿಕ ಕಲಹ, ಹೊಂದಾಣಿಕೆ ಸಮಸ್ಯೆ, ಉದ್ಯೋಗ ಬದಲಾವಣೆ, ಸ್ಥಾನಮಾನದ ಅಹಂ, ಖಾಸಗಿ ಸ್ವಾತಂತ್ರ್ಯಕ್ಕೆ ಧಕ್ಕೆಯಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಯುವ ದಂಪತಿಗಳು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಈ ಪೈಕಿ ಎರಡೆರಡು ವಿವಾಹವಾಗಿ ಅನಂತರ ಸತ್ಯ ಗೊತ್ತಾಗಿ ವಿಚ್ಛೇದನಕ್ಕೆ ಮೊರೆ ಹೋಗುವ ಪ್ರಕರಣಗಳೂ ಇವೆ ಎಂದು ಹೇಳುತ್ತಾರೆ. ವ್ಯಾಸಂಗ ಮಾಡುವಾಗ ಹೆತ್ತವರಿಗೆ ತಿಳಿಯದಂತೆ ವಿವಾಹವಾಗುವ ಯುವಜನರು ಮನೆಯವರಿಗೆ ವಿಷಯ ಗೊತ್ತಾದ ಕೂಡಲೇ ವಿಚ್ಛೇದನಕ್ಕೆ ಮುಂದಾಗುವುದು ಅಂತರ್ ಧರ್ಮೀಯ ಇಲ್ಲವೇ ಅಂತರ್ ಜಾತಿ ವಿವಾಹವಾಗುವ ಜೋಡಿ ಸಂಸ್ಕೃತಿ ಭಿನ್ನತೆ, ಆಚಾರ-ವಿಚಾರಗಳ ಸಣ್ಣಪುಟ್ಟ ಮನಸ್ತಾಪಗಳಿಂದಲೇ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಮಾಡಿ ವಿಚ್ಛೇದನಕ್ಕೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ ಎಂದು ವಿವರಿಸುತ್ತಾರೆ.
ಮೊದಲ ರಾತ್ರಿಯೇ ಬಿರುಕು
ಬೆಂಗಳೂರಿನ ಜೆ.ಪಿ.ನಗರದ ಪ್ರಶಾಂತ್ ಹಾಗೂ ನೀಲಾ (ಹೆಸರು ಬದಲಿಸಲಾಗಿದೆ) ವಿವಾಹ 2015ರಲ್ಲಿ ನಡೆದಿತ್ತು. ಮೊದಲ ರಾತ್ರಿಯ ದಿನ ಪತಿ, ಬೆಡ್‌ರೂಮ್‌ನಲ್ಲಿ ಕುತೂಹಲಕ್ಕೆ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಆಕೆಯ ಕುರಿತ ಕೆಲ ತೀರಾ ವೈಯಕ್ತಿಕ ಮೆಸೇಜ್ ಹಾಗೂ ಇನ್ನಿತರೆ ಮಾಹಿತಿ ಗೊತ್ತಾಗಿದೆ. ಇದರಿಂದ ತೀವ್ರ ವಿಚಲಿತಗೊಂಡ ಆತ ವಿಚ್ಛೇದನಕ್ಕೆ ನಿರ್ಧರಿಸಿ ಪ್ರತ್ಯೇಕವಾಗಿ ನೆಲೆಸಲು ನಿರ್ಧರಿಸಿದ್ದಾರೆ. ಪೋಷಕರ ರಾಜಿ ಸಂಧಾನ ಫಲ ನೀಡದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದು, ಮಧ್ಯಸ್ಥಿಕೆ ಕೇಂದ್ರದಲ್ಲಿಯೂ ಅರ್ಜಿ ಇತ್ಯರ್ಥವಾಗದೇ ಸದ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
– ಮಂಜುನಾಥ ಲಘುಮೇನಹಳ್ಳಿ