Advertisement

ಕಲಬುರಗಿಯಲ್ಲಿ ವಿಭಾಗೀಯ ಕಚೇರಿ

04:35 PM Jan 29, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನರು ಮತ್ತು ಗ್ರಾಹಕರಿಗೆ ಆರ್ಥಿಕ ಚಟುವಟಿಕೆಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ನಗರದಲ್ಲಿ ಯೂನಿಯನ್‌ ಬ್ಯಾಂಕ್‌ನ ವಿಭಾಗೀಯ ಕಚೇರಿ ಆರಂಭಿಸಲಾಗಿದೆ. ಇದರಿಂದ ಈ ಭಾಗದ ಐದು
ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ವಲಯ ಮಹಾಪ್ರಬಂಧಕ ಬಿ. ಶ್ರೀನಿವಾಸರಾವ್‌ ಹೇಳಿದರು.

Advertisement

ಇಲ್ಲಿನ ಹೈಕೋರ್ಟ್‌ ಪೀಠ ಸಮೀಪ ಯೂನಿಯನ್‌ ಬ್ಯಾಂಕ್‌ ವಿಭಾಗೀಯ ಕಚೇರಿಯನ್ನು ಗುರುವಾರ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವಿಭಾಗೀಯ ಕಚೇರಿ ವ್ಯಾಪ್ತಿಗೆ ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ವಿಜಯಪುರ ಜಿಲ್ಲೆಗಳ ಗ್ರಾಹಕರು ಒಳಪಡುತ್ತಾರೆ ಎಂದು ತಿಳಿಸಿದರು.

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಂತರ ಆಂಧ್ರಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ ಗಳು ಯೂನಿಯನ್‌ ಬ್ಯಾಂಕ್‌ನಲ್ಲಿ ವಿಲೀನಗೊಂಡಿವೆ. ಇದರಿಂದ ಯೂನಿಯನ್‌ ಬ್ಯಾಂಕ್‌ ವ್ಯಾಪ್ತಿ ಬೃಹತ್ತಾಗಿ ಬೆಳೆದಿದೆ. ದೇಶಾದ್ಯಂತ ಒಟ್ಟು 15.37 ಲಕ್ಷ ಕೋಟಿ ಮೊತ್ತದ ವ್ಯವಹಾರವನ್ನು ಬ್ಯಾಂಕ್‌ ನಿರ್ವಹಿಸುತ್ತಿದೆ.
ಒಟ್ಟಾರೆ 9,590 ಬ್ರ್ಯಾಂಚ್ಚ್‌ಗಳನ್ನು ಹೊಂದಿದ್ದು, 12  ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಲಾಗಿದೆ. 8.86 ಲಕ್ಷ ಕೋಟಿ ರೂ. ಠೇವಣಿಯನ್ನು ಬ್ಯಾಂಕ್‌
ಹೊಂದಿದ್ದು, 6.51 ಲಕ್ಷ ಕೋಟಿ ರೂ. ಮುಂಗಡ ಜಮೆ ಇದೆ ಎಂದರು.

ಕೊರೊನಾ ಹಾವಳಿ ಇದ್ದಾಗಲೂ ಎಲ್ಲ ಬ್ಯಾಂಕ್‌ ಗಳಂತೆ ಯೂನಿಯನ್‌ ಬ್ಯಾಂಕ್‌ ಉತ್ತಮ ಮತ್ತು ನಿರಂತರ ಸೇವೆ ಸಲ್ಲಿಸಿದೆ. ಜನರಿಗೆ ಆರ್ಥಿಕ ಹೊರೆಯಾಗದಂತೆ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ತನ್ನದೇ ಆದ ಪಾಲು ಹಾಗೂ ಕಾಣಿಕೆ ನೀಡುತ್ತಿದೆ. ದೇಶದ ಮುಂಚೂಣಿ ಬ್ಯಾಂಕ್‌ ಗಳ ಸಾಲಿನಲ್ಲಿ ಬ್ಯಾಂಕ್‌ ಇದ್ದು, ಸಣ್ಣ, ಸೂಕ್ಷ್ಮಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವಲ್ಲಿ ದೇಶದ ಎರಡನೇ ದೊಡ್ಡ ಬ್ಯಾಂಕ್‌ ಆಗಿದೆ.

ಒಟ್ಟಾರೆ ಸಾಲ ವಿತರಣೆಯಲ್ಲಿ ದೇಶದ ಮೂರನೇ ಸ್ಥಾನದಲ್ಲಿದ್ದು, ನೆಟ್‌ವರ್ಕ್‌ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನ ಹೊಂದಲಾಗಿದೆ ಎಂದು ವಿವರಿಸಿದರು. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ ಮತ್ತು  ಬೆಳಗಾವಿಯಲ್ಲಿ ವಿಭಾಗೀಯ ಕಚೇರಿಗಳು ಇವೆ. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳ ಬೆಳಗಾವಿ ಕಚೇರಿಯನ್ನೇ ಅವಲಂಬಿಸಿದ್ದವು. ಕಲ್ಯಾಣ ಕರ್ನಾಟಕದ ಭಾಗದ ಗ್ರಾಹಕರಿಗೆ ಇದು ತುಂಬಾ ದೂರ ಮತ್ತು ವೆಚ್ಚದಾಯಕವಾಗಿತ್ತು. ಇದನ್ನು
ಮನಗಂಡು ಮತ್ತು ಗ್ರಾಹಕರ ಹೊರೆ ತಪ್ಪಿಸಲು ಕಲಬುರಗಿ ವಿಭಾಗೀಯ ಕಚೇರಿ ತೆರೆಯಲಾಗಿದೆ ಎಂದು ತಿಳಿಸಿದರು.

Advertisement

ಕಲಬುರಗಿ ತೊಗರಿ ನಾಡಾಗಿದ್ದು, ಇಲ್ಲಿ ಹಲವಾರು ದಾಲ್‌ಮಿಲ್‌ ಇವೆ. ಇವುಗಳ ಪುನಶ್ಚೇತನಕ್ಕೆ ಬ್ಯಾಂಕ್‌ ವಿಶೇಷ ಗಮನ ಕೊಡಲಿದೆ. ಪಕ್ಕದ ರಾಯಚೂರು
ಅಕ್ಕಿ ಕಣಜವಾಗಿದ್ದು, ರೈಸ್‌ ಮಿಲ್‌ಗ‌ಳು ಅಧಿಕ ಇವೆ. ಅಲ್ಲಿ ರೈಸ್‌ ಮಿಲ್‌ಗ‌ಳಿಗೆ ಪ್ರೋತ್ಸಾಹ ನೀಡುವಲ್ಲಿ ಗಮನ ಹರಿಸಲಿದೆ. ವಿಜಯಪುರದಲ್ಲಿ ತೋಟಗಾರಿಕೆ, ಆಹಾರೋತ್ಪನ್ನ, ಕೃಷಿ ಪರಿಕರ ಮತ್ತು ದ್ರಾಕ್ಷಿ ಬೆಳೆ‌ ಉದ್ಯಮವಿದೆ. ಹೀಗೆ ಆಯಾ ಜಿಲ್ಲೆಗಳ ಗ್ರಾಹಕರು ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಬೆಳೆಯಲು ಬೇಕಾದ ಅವಶ್ಯಕ ಸೌಲಭ್ಯವನ್ನು ನೀಡಲು ಬ್ಯಾಂಕ್‌ ಆದ್ಯತೆ  ನೀಡಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ವಿಭಾಗೀಯ ಕಚೇರಿ ಮುಖ್ಯಸ್ಥ ಟಿ.ಎ.ನಾರಾಯಣನ್‌, ಉಪ ಮಹಾಪ್ರಬಂಧಕ ಎಸ್‌.ಕೆ.ಲೋನಿ ಇದ್ದರು.

ಕಲಬುರಗಿ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 58 ಶಾಖೆಗಳು ಬರುತ್ತವೆ. ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 15 ಶಾಖೆಗಳು, ಬೀದರ್‌ ಜಿಲ್ಲೆಯಲ್ಲಿ ಏಳು, ಯಾದಗಿರಿ ಜಿಲ್ಲೆಯಲ್ಲಿ ಆರು ಶಾಖೆಗಳು ಇವೆ. ಮುಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲೆಯ ವಡಗೇರಾ, ಸುರಪುರ, ಕೆಂಭಾವಿ, ಹುಣಸಗಿ, ಕಲಬುರಗಿ ಜಿಲ್ಲೆಯ ಯಡ್ರಾಮಿ ಮತ್ತು ರಾಯಚೂರು ಜಿಲ್ಲೆಯ ಕೆಐಎಡಿಬಿ ಪ್ರದೇಶ, ಮಸ್ಕಿ, ದೇವದುರ್ಗ ಸೇರಿ ಎಂಟು ಶಾಖೆಗಳನ್ನು
ತೆರೆಯುವ ಯೋಜನೆ ಇದೆ.
ಬಿ. ಶ್ರೀನಿವಾಸರಾವ್‌, ಬೆಂಗಳೂರು
ವಲಯ ಮಹಾಪ್ರಬಂಧಕ, ಯೂನಿಯನ್‌ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next