Advertisement

ಅಕ್ಟೋಬರ್‌ನಲ್ಲಿ ವಿಭಾಗಮಟ್ಟದ ರೈತ ಗೋಷ್ಠಿ

01:27 PM Sep 27, 2017 | Team Udayavani |

ಹುಬ್ಬಳ್ಳಿ: ಸಾಲಮನ್ನಾದಿಂದ ರೈತರ ಬದುಕು ಹಸನಾಗುವುದಿಲ್ಲ. ಬದಲಾಗಿ ಅವರು ಹೇಗೆ ಜೀವನ ಸಾಗಿಸಬೇಕೆಂಬುದು ಮುಖ್ಯ. ಆ ನಿಟ್ಟಿನಲ್ಲಿ ಅಕ್ಟೋಬರ್‌ನಲ್ಲಿ ಬೆಳಗಾವಿ ವಿಭಾಗಮಟ್ಟದ ವಿಚಾರ ಗೋಷ್ಠಿಯನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. 

Advertisement

ಇಲ್ಲಿನ ಜೆ.ಸಿ. ನಗರದ ಅಕ್ಕನ ಬಳಗ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್‌ ಹು-ಧಾ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಸ್ವಾವಲಂಬಿ ಜೀವನ ಸಾಗಿಸಲು ಹಾಗೂ ಅವರು ಹೇಗೆ ಬದುಕಬೇಕೆಂಬ ಬಗ್ಗೆ ಕಾರ್ಯಾಗಾರ ಮುಖ್ಯ.

ಆ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ನಾನು ಸೇರಿದಂತೆ ಇನ್ನಿತರರು ಇಸ್ರೇಲ್‌ಗೆ ತೆರಳಿ ಅಲ್ಲಿನ ರೈತರು ಕೈಗೊಳ್ಳುತ್ತಿರುವ ಕೃಷಿ ಬಗ್ಗೆ ಅಧ್ಯಯನ ಮಾಡಿ ಬಂದಿದ್ದೇವೆ. ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಕೃಷಿ ಸಂಸ್ಥೆಯೊಂದರ ಸಿಇಒ ಓಝ್ ಹಾಗೂ ಅವರೊಂದಿಗೆ ಇನ್ನಿಬ್ಬರು ಕೃಷಿ ಪಂಡಿತರು ಅಕ್ಟೋಬರ್‌ಲ್ಲಿ ರಾಜ್ಯಕ್ಕೆ ಬರಲು ಸಿದ್ಧರಾಗಿದ್ದಾರೆ.

ಆಗ ನಗರದಲ್ಲಿ ರೈತರಿಗಾಗಿ ವಿಚಾರಗೋಷ್ಠಿ ಆಯೋಜಿಸಲಾಗುವುದು ಎಂದರು. ರಾಜ್ಯದಲ್ಲಿನ ಎಲ್ಲ ಮುಖ್ಯಮಂತ್ರಿಗಳ ಆಡಳಿತಕ್ಕಿಂತ ಕೆಟ್ಟ ಆಡಳಿತ ಸಿದ್ದರಾಮಯ್ಯ ಅವರ ಸರಕಾರದ್ದಾಗಿದೆ. ಎಲ್ಲ ಭಾಗ್ಯ ಯೋಜನೆಗಳನ್ನು ಮುಗಿಸಿರುವ ಅವರು ಈಗ 2018ರ ಭಾಗ್ಯ ಹುಡುಕುತ್ತಿದ್ದಾರೆ. ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ.

ಅವರ ಬಜೆಟ್‌ 1,68,00,000 ಕೋಟಿ ರೂ. ಆಗಿದ್ದು, ಈಗಾಗಲೇ 1,38,00,000 ಕೋಟಿ ರೂ. ಸಾಲ ಮಾಡಿದ್ದಾರೆ. ಇನ್ನು ಚುನಾವಣೆ ಬರುವುದರೊಳಗೆ ಅದೆಷ್ಟು ಕೋಟಿ ರೂ. ಸಾಲ ಮಾಡಿ ಸರಕಾರದ ಖಜಾನೆ ಖಾಲಿ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ವ್ಯಾಪಾರಸ್ಥರ ಪರವಿದ್ದಾರೆ.

Advertisement

ಜಿಎಸ್‌ಟಿ ನಿಧಾನ ವಿಷವಾಗಿದ್ದು, ಲಾಭ ಎಲ್ಲಿ ಬರುತ್ತದೋ ಅಲ್ಲಿ ಅವರು ಕೈ ಹಾಕುತ್ತಾರೆ. ಬಿಜೆಪಿಯವರು ಮಹದಾಯಿ ಬಗ್ಗೆ ಹಾಗೂ ವೀರಶೈವ-ಲಿಂಗಾಯತ ಧರ್ಮ ಬಗ್ಗೆ ಬಾಯಿ ಬಿಡುತ್ತಿಲ್ಲ. ಈಗ ಮಹದಾಯಿ ಸಮಸ್ಯೆಯನ್ನು ಒಮ್ಮೆಲೆ ಬಗೆಹರಿಸುವವರಂತೆ ಮಾತನಾಡುತ್ತಿದ್ದಾರೆ. ಅವರು ಸಮಯಸಾಧಕರು.

ಕಾಂಗ್ರೆಸ್‌ ಮತ್ತು ಬಿಜೆಪಿ ಅವರ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು. ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ರೈತರ ಫಸಲು ಬೀಮಾ ಯೋಜನೆ ಹಣ ಬಿಡುಗಡೆ ಹಾಗೂ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪಕ್ಷದಿಂದ ಅಕ್ಟೋಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ಹೋರಾಟ ಮಾಡಲಾಗುವುದು ಎಂದರು. 

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳುಗಳ ಸರದಾರರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕಾದರೆ ಜೆಡಿಎಸ್‌ನ್ನು ತಳಮಟ್ಟದಿಂದಲೇ ಸಂಘಟಿಸುವುದು ಅವಶ್ಯ ಎಂದು ಹೇಳಿದರು. 

ರಾಜ್ಯ ರೈತ ಘಟಕದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿದರು. ಮಾಜಿ ಶಾಸಕ ಇಸ್ಮಾಯಿಲಸಾಬ ಕಾಲೇಬುಡ್ಡೆ, ಮುಜಾಹಿದ್‌ ಕಾಂಟ್ರಾಕ್ಟರ್‌, ಪಾಲಿಕೆ ಸದಸ್ಯರಾದ ಅಲ್ತಾಫ ಕಿತ್ತೂರ, ಸಂತೋಷ ಹಿರೇಕೆರೂರ ಇತರರಿದ್ದರು. ವಿಕಾಸ ಸೊಪ್ಪಿನ ಸ್ವಾಗತಿಸಿದರು. ಜೆಡಿಎಸ್‌ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿದರು. ನವೀದ ಮುಲ್ಲಾ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next