ಬೆಂಗಳೂರು: ಪ್ರಣವಾನಂದ ಸ್ವಾಮೀಜಿ ಅವರನ್ನು ಸಮುದಾಯದ ಗುರುಗಳು ಎಂದು ಸ್ವೀಕರಿಸುವ ವಿಚಾರದಲ್ಲಿ ಈಡಿಗ ಸಮುದಾಯದಲ್ಲಿ ಒಡಕುಂಟಾಗಿದೆ.
ಈ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಣವಾನಂದ ಶ್ರೀಗಳು ನಮ್ಮ ಸಮುದಾಯದವರೇ ಅಲ್ಲ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿ ಚರ್ಚೆಗೆ ಗ್ರಾಸವಾಗಿದ್ದರು. ಈ ವೇಳೆ ಶಿವಮೊಗ್ಗ, ಉತ್ತರ ಕರ್ನಾಟಕ, ಬೆಳಗಾವಿ, ಚಿಕ್ಕಮಗಳೂರು ಸಹಿತ ಮಲೆನಾಡು ಭಾಗದ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷರು ಸಚಿವ ಮಧು ಬಂಗಾರಪ್ಪ ಅವರ ಬೆಂಬಲಕ್ಕೆ ನಿಂತಿದ್ದರು. ಜತೆಗೆ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಕೂಡ ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯದ ಸ್ವಾಮೀಜಿ ಅಲ್ಲ ಎಂದು ಹೇಳಿದ್ದರು.
ಈಗ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್, ತಿಮ್ಮೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಣವಾನಂದ ಸ್ವಾಮೀಜಿ ಈಡಿಗರಲ್ಲ ಎನ್ನುವ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನವನ್ನು ಕರ್ನಾಟಕ ಪ್ರದೇಶ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಮತ್ತು ಇತರರು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶ್ರೀನಾಥ್, ಕಳೆದ ವರ್ಷ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದ್ದ ಈಡಿಗರ ಬೃಹತ್ ಸಮಾವೇಶದಲ್ಲಿ ತಿಮ್ಮೇಗೌಡರು ಸಹಿತ ಸಂಘದ ಬಹುತೇಕರು ಪಾಲ್ಗೊಂಡಿದ್ದರು. ಪ್ರಣವಾನಂದ ಸ್ವಾಮೀಜಿ ಜತೆಗೆ ಸೇರಿ ಸಮುದಾಯದ ಒಳಿತಿಗೆ ಕೆಲಸ ಮಾಡುವುದಾಗಿ ಪ್ರಕಟಿಸಿದ್ದರು. ಆಗ ನಮ್ಮವರೆಂದು ಒಪ್ಪಿಕೊಂಡಿದ್ದ ಪ್ರಣವಾನಂದ ಸ್ವಾಮೀಜಿಯವರು ಈಗ ಈಡಿಗ ಸಮುದಾಯದ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಸಮಯ ದಲ್ಲಿ ಬೇರೆಯವರಾಗಲು ಕಾರಣಗಳೇನು ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಲ್ಲಿರುವುದು 15,000 ಸದಸ್ಯರು ಮಾತ್ರ.
ಈ ಸಂಘವೊಂದೇ ರಾಜ್ಯದ ಸಮಸ್ತ ಈಡಿಗ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಎನ್ನಲು ಸಾಧ್ಯವಿಲ್ಲ. ಯಾರು ಈಡಿಗರು? ಯಾರು ಈಡಿಗರಲ್ಲ ಎಂಬ ತೀರ್ಪು ನೀಡುವ ಅಧಿಕಾರವೂ ಈ ಸಂಘಕ್ಕಿಲ್ಲ. ರಾಜ್ಯದ ಈಡಿಗ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ತನ್ನ ಬೈಲಾದ ವ್ಯಾಪ್ತಿ ಮೀರದಂತೆ ಕೆಲಸ ಮಾಡುವುದು ಸಂಘದ ಜವಾಬ್ದಾರಿ ಎಂದು ಹೇಳಿದ್ದಾರೆ.
ಪ್ರಣವಾನಂದ ಸ್ವಾಮೀಜಿಯವರು ಕಾಲ್ನಡಿಗೆ ಹೋರಾಟ ಮಾಡಿದ ಪರಿಣಾಮವಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಇದನ್ನೆಲ್ಲ ಮರೆಮಾಚಲು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಟೀಕಿಸುವುದನ್ನು ಈಡಿಗರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಿಲ್ಲಿಸಬೇಕು ಎಂದಿದ್ದಾರೆ. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಯಾವುದೋ ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿದು ಸಮುದಾಯವನ್ನೇ ಒಡೆಯುವಂತಹ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.