ಶಿರಸಿ: ಕಳೆದ ಆರೆಂಟು ತಿಂಗಳ ಹಿಂದಷ್ಟೇ ಕರ್ನಾಟಕ ಬಯಲಾಟ ಯಕ್ಷಗಾನ ಜಂಟಿ ಅಕಾಡೆಮಿಯಿಂದ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲಾಯಿತು. ಆದರೆ, ಅಕಾಡೆಮಿ ವಿಭಾಗಿಸುವಾಗ ಕೇವಲ ಅಕಾಡೆಮಿ ಒಡೆಯಲಿಲ್ಲ. ಆಸ್ತಿಯಂತೆ ಜಂಟಿಯಾಗಿದ್ದಾಗ ಕೊಡುತ್ತಿದ್ದ ಪ್ರಶಸ್ತಿಗಳನ್ನು ಒಡೆದು ಹಿಸ್ಸೆ ಮಾಡಿದರು! ಇದರ ಪರಿಣಾಮ ಬಯಲಾಟಕ್ಕೆ ಐದು, ಯಕ್ಷಗಾನಕ್ಕೆ ಐದು ಪ್ರಶಸ್ತಿ ನೀಡಲು ಅನುಮತಿ ಪ್ರಕಟಿಸಲಾಯಿತು! ಇದರ ಪರಿಣಾಮ ಅಕ್ಷರಶಃ ಕನ್ನಡದ ಅಪ್ಪಟ ಕಲೆಯನ್ನು ಉಸಿರಾಗಿಸಿಕೊಂಡ, ಯಕ್ಷಗಾನ ಬಿಟ್ಟರೆ ಬೇರೇನೂ ಗೊತ್ತಿರದ ಕಲಾವಿದರನ್ನೂ ಅಕಾಡೆಮಿ ಗುರುತಿಸಲು ಕಣ್ಣಿದ್ದೂ ಕುರುಡಾಗುವಂತೆ ಆಯಿತು!
ಕನ್ನಡದ ಕಲೆ: ಬಹುತೇಕ ಕರ್ನಾಟಕವನ್ನು ವ್ಯಾಪಿಸಿಕೊಂಡ ಕಲೆ ಯಕ್ಷಗಾನ. ಇಂಥ ಕಲೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ನಿರಂತರ ಸಾಧನೆ ಮಾಡುತ್ತಿರುವ ಹಿರಿಯ, ಅಷ್ಟೇ ಅರ್ಹ ಕಲಾವಿದರಿದ್ದಾರೆ. ಒಂದು ಕಾಲಕ್ಕೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದ ಯಕ್ಷಗಾನ ಇಂದು ಅದರ ಗಡಿ ದಾಟಿದೆ. ಅನ್ಯ ಭಾಷೆಯ ಸೋಂಕಿಲ್ಲದೇ ಇರುವ ಯಕ್ಷಗಾನದ ಏಳ್ಗೆಗೆ
ಅನವರತ ಕಾರ್ಯ ಮಾಡಿದ, ಅದರ ಪೆಟ್ಟಿಗೆಗಳನ್ನೂ ಹೊತ್ತು ಹಳ್ಳಿಹಳ್ಳಿ ಕಾಲ್ನಡಿಗೆಯಲ್ಲಿ ಸುತ್ತಾಡಿದ, ಕೊಡುವ ಗೌರವ ಧನ ಕಡಿಮೆ ಇದ್ದರೂ ಕಲೆಯ ಪ್ರಚಾರದಲ್ಲಿ ತೊಡಗಿದ, ಕಲಿಸಿದ ಅನೇಕ ಕಲಾವಿದರು ಇನ್ನೂ ಎಲೆಮರೆಯ ಕಾಯಿಯೇ ಆಗಿದ್ದಾರೆ. ಶತ ಶತಮಾನಗಳ ಇತಿಹಾಸವುಳ್ಳ ಕಲೆಯ ಏಳ್ಗೆಗೆ, ಅದರಲ್ಲಿ ಕೆಲಸ ಮಾಡಿದ ಅನೇಕರನ್ನು ಗುರುತಿಸಲು ಸರಕಾರ ಪ್ರಶಸ್ತಿ ಮೊತ್ತ ಅಧಿಕ ಮಾಡಬೇಕಿತ್ತು.
ಆದರೆ, ಆದದ್ದೇ ಬೇರೆ! ಆದರೆ, ಆದದ್ದೇ ಬೇರೆ. ಅಕಾಡೆಮಿಗಳನ್ನು ವಿಭಾಗಿಸುವ ಬಹುಕಾಲದ ಒತ್ತಾಯಕ್ಕೆ ಸ್ಪಂದಿಸಿದ ಸರಕಾರ ಪ್ರಶಸ್ತಿಯನ್ನೂ ವಿಭಾಗಿಸಿದೆ. ಅನುದಾನ ಲಭ್ಯತೆ ಹಾಗೂ ಇನ್ನಿತರ ಕಾರಣ ಇಟ್ಟು ಸರಕಾರ ತಲಾ ಐದು ಪ್ರಶಸ್ತಿ ನೀಡಲು ಅನುಮತಿ ನೀಡಿದೆ. ಇನ್ನೂ ಪ್ರಶಸ್ತಿ ಲಭಿಸದ, ಸರಕಾರದ ಯಾವುದೇ ಗೌರವಕ್ಕೂ ಭಾಜನರಾಗದ ಕಲಾವಿದರ ಸಮೂಹವೇ ಇದ್ದಾಗ ಈ ಬೆರಳೆಣಿಕೆಯ ಪ್ರಶಸ್ತಿ ಸಂಖ್ಯೆ ಇಕ್ಕಟ್ಟಿಗೆ ಸಿಲುಕಿಸುವಂತೆ ಆಗಿದೆ.
ಯಕ್ಷಗಾನ ಅಕಾಡೆಮಿ ಅಂದರೆ ಮೂಡಲಪಾಯ, ಯಕ್ಷಗಾನದಲ್ಲಿ ತೆಂಕು, ಬಡಗು, ಬಡಾಬಡಗು, ತಾಳಮದ್ದಲೆ, ಹಿಮ್ಮೇಳ, ಮುಮ್ಮೇಳ ಇದು ಸಮೂಹ ಕಲೆಯಾಗಿದ್ದರಿಂದ ಇಲ್ಲಿ ಬೆರಳೆಣಿಕೆಯ ಪ್ರಶಸ್ತಿ ಇಟ್ಟುಕೊಂಡು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅಕಾಡೆಮಿ ಈ ವರ್ಷದಿಂದೇ ಈ ಪ್ರಶಸ್ತಿ ಸಂಖ್ಯೆ ಹಾಗೂ ಮೊತ್ತ ಏರಿಕೆ ಮಾಡಬೇಕು. ಸಾಹಿತ್ಯ ಅಕಾಡೆಮಿ ಮಾದರಿಯಲ್ಲಿ ಪ್ರಶಸ್ತಿ ನಿಗದಿಗೊಳಿಸುವ ಆಗ್ರಹ ಕೂಡ ಕೇಳಿ ಬಂದಿದೆ.
ಯಕ್ಷಶ್ರೀಗೆ ಪ್ರಸ್ತಾವನೆ: ಈಗಾಗಲೇ ಯಕ್ಷಗಾನ ಅಕಾಡೆಮಿ ಒಂದು ಲಕ್ಷ ರೂ. ಮೌಲ್ಯದ ಪಾರ್ತಿ ಸುಬ್ಬ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡುತ್ತಿದೆ. ಆದರೆ, ಕರ್ನಾಟಕ ಸರಕಾರ ಸಾಹಿತಿಗಳಿಗೆ, ಸಂಗೀತ ಕಲಾವಿದರುಗಳಿಗೆ, ಜಾನಪದ ಕ್ಷೇತ್ರದ ಸಾಧಕರಿಗೆ ನೀಡುವಂತ ಜಾನಪದಶ್ರೀ ಮಾದರಿಯಲ್ಲಿ ಯಕ್ಷಗಾನ ಕಲಾವಿದರಿಗೆ ಲಭಿಸುತ್ತಿಲ್ಲ. ಹೀಗಾಗಿ ಈ ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತ್ಯೇಕವಾಗಿ ಡಾ| ಶಿವರಾಮ ಕಾರಂತರ ಹೆಸರಿನಲ್ಲಿ ಯಕ್ಷಶ್ರೀ ಪ್ರಶಸ್ತಿ ನೀಡಬೇಕು ಎಂಬ ಪ್ರಸ್ತಾವನೆಯನ್ನು ಯಕ್ಷಗಾನ ಅಕಾಡೆಮಿ ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ ಎನ್ನುತ್ತಾರೆ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ.ಹೆಗಡೆ ದಂಟ್ಕಲ್.
ಇರುವ ಐದು ಪ್ರಶಸ್ತಿ ಏನಕ್ಕೂ ಸಾಲದು. ಅಕಾಡೆಮಿ ಅನುದಾನದಲ್ಲೇ ಕನಿಷ್ಠ 5 ಗೌರವ ಹಾಗೂ 10 ಸಾಮಾನ್ಯ ಪ್ರಶಸ್ತಿ ನೀಡಲು ಅನುಮತಿ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ಪ್ರೊ| ಎಂ.ಎ. ಹೆಗಡೆ ದಂಟ್ಕಲ್,
ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ
ಹಿಮ್ಮೇಳ, ಮುಮ್ಮೇಳ ಕಲಾವಿದರು, ವೇಷಭೂಷಣ ತಯಾರಕರು, ತಾಳಮದ್ದಲೆ ಅರ್ಥದಾರಿಗಳು ಸೇರಿದಂತೆ ಅರ್ಹರ ಗುರುತಿಸುವಿಕೆ ಕಾರ್ಯ ಆಗಬೇಕು. ಅದಕ್ಕಾಗಿ ಅಕಾಡೆಮಿ ಕನಿಷ್ಠ 10 ಗೌರವ ಪ್ರಶಸ್ತಿ ಹಾಗೂ 10 ಪ್ರಶಸ್ತಿಗಳನ್ನು ನೀಡಬೇಕು.
ಕೇಶವ ಹೆಗಡೆ ಕೊಳಗಿ,
ಹಿರಿಯ ಭಾಗವತ
ರಾಘವೇಂದ್ರ ಬೆಟ್ಟಕೊಪ್ಪ