Advertisement

ದಿವ್ಯ ನಿರ್ಲಕ್ಷ್ಯ: ಪಾಳು ಬಿದ್ದ ಉದ್ಯಾನವನ!

05:10 PM May 20, 2018 | Team Udayavani |

ಬಳ್ಳಾರಿ: ಇಲ್ಲಿನ ಹೊರವಲಯದ ಕುವೆಂಪು ನಗರ ಬಳಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ತ್ರಿಕೋಣಾಕಾರದಲ್ಲಿ ನಿರ್ಮಿಸಲಾಗಿರುವ ಉದ್ಯಾನವನ ಹಲವು ವರ್ಷಗಳಿಂದ ಅಧ್ವಾನಕ್ಕೆ ದಾರಿ ಮಾಡಿಕೊಟ್ಟಿದೆ. ಬಳ್ಳಾರಿ ಜಾಲಿಯಿಂದ ತುಂಬಿಕೊಂಡಿರುವ ಈ ಉದ್ಯಾನವನ ಸಾರ್ವಜನಿಕರಿಗೆ ಬಳಕೆಯಾಗದೆ ಮೂಲ ಉದ್ದೇಶದಿಂದ ವಂಚಿತವಾಗಿದ್ದು, ಇದಕ್ಕಾಗಿ ವೆಚ್ಚ ಮಾಡಲಾಗಿದ್ದ ಲಕ್ಷಾಂತರ ರೂ. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ದಿನೇ ದಿನೇ ವಿಸ್ತಾರಗೊಳ್ಳುತ್ತಿರುವ ನಗರ, ಪಟ್ಟಣ ಪ್ರದೇಶಗಳಲ್ಲಿ ಉದ್ಯಾನವನಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತಿದೆ.

Advertisement

ಉದ್ಯಾನವನಗಳ ನಿರ್ಮಾಣದಿಂದ ನಗರದ ಸೌಂದರ್ಯ ಹೆಚ್ಚುವುದರ ಜತೆಗೆ ಸ್ಥಳೀಯ ನಿವಾಸಿಗಳ ಆರೋಗ್ಯ ವೃದ್ಧಿಗೆ ಪ್ರತಿದಿನ ಬೆಳಗಿನ ಜಾವ ಮತ್ತು ಸಂಜೆ ಹೊತ್ತಲ್ಲಿ ವಾಯು ವಿಹಾರಕ್ಕೆ ಅನುಕೂಲವಾಗಲಿದೆ. ಇದಕ್ಕಾಗಿ ಇಲ್ಲಿನ ಹೊರ ವಲಯದ ಕುವೆಂಪು ನಗರ ಬಳಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ 2014-2015ನೇ ಸಾಲಿನಲ್ಲಿ
8.5 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಲಾಗಿತ್ತಾದರೂ, ನಂತರ ನಿರ್ವಹಣೆ ಕೊರತೆಯಿಂದಾಗಿ ಇಡೀ ಉದ್ಯಾನವನದಲ್ಲಿ ಬಳ್ಳಾರಿ ಜಾಲೆ ಬೆಳೆದು ನಿಂತಿದ್ದು, ಸಾರ್ವಜನಿಕರ ಬಳಕೆಗೆ ನಿರುಪಯುಕ್ತವಾಗಿದೆ. ಉದ್ಯಾನವನ ನಿರ್ಮಾಣದಿಂದ ಸ್ಥಳೀಯ ಜಯನಗರ, ಕಂಟೋನ್ಮೆಂಟ್‌, ಪಕ್ಕದ ಕುವೆಂಪುನಗರ 1ನೇ ಅಡ್ಡರಸ್ತೆ ನಿವಾಸಿಗಳಿಗೆ ವಾಯು ವಿಹಾರಕ್ಕೆ ಅನುಕೂಲವಾಗಲಿದೆ. ಆದರೆ, ನಿರ್ಮಾಣ ವಾದಾಗಿನಿಂದಲೂ ನಿರ್ವಹಣೆ ಮಾತ್ರ ಶೂನ್ಯವಾಗಿದೆ. ಉದ್ಯಾನವನದಲ್ಲಿ ಪಾದಾಚಾರಿ ರಸ್ತೆಯನ್ನು ನಿರ್ಮಿಸಲಾಗಿದೆ. ಹತ್ತಾರು ರೆಡಿಮೇಡ್‌ ಕಾಂಕ್ರೀಟ್‌ ಆಸನಗಳನ್ನು ಹಾಕಲಾಗಿದೆ.

ಜಾರುಬಂಡೆ, ತೂಗೂಯ್ನಾಲೆ ಸೇರಿದಂತೆ ಚಿಣ್ಣರ ಆಟಿಕೆಯ ಅತ್ಯಾಧುನಿಕೆ ಯಂತ್ರೋಪಕರಣದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಆದರೆ ಬಳಕೆಯಿಲ್ಲದೇ ಅವುಗಳೆಲ್ಲವೂ ತುಕ್ಕು ಹಿಡಿದಿವೆ. ಹಾಗಾಗಿ, ಪ್ರಾಧಿಕಾರದ ಲಕ್ಷಾಂತರ
ರೂ. ಅನುದಾನವು ವೃಥಾ ಪೋಲಾಗಿದ್ದು, ಬುಡಾ ಲೆಕ್ಕದಲ್ಲಿರುವ ಉದ್ಯಾನವನ ಸಾರ್ವಜನಿಕರ ಬಳಕೆಯಲ್ಲಿಲ್ಲ.
 
ಈ ಮೊದಲು ಉದ್ಯಾನದ ನಿರ್ವಹಣೆ ಜವಾಬ್ದಾರಿಯನ್ನು ಕುವೆಂಪು ನಗರ ನಿವಾಸಿಗಳ ಅಸೋಸಿಯೇಷನ್‌
ವಹಿಸಿಕೊಂಡಿತ್ತು. ಅದರ ಸಂಪೂರ್ಣ ಜವಾಬ್ದಾರಿಯನ್ನು ಪ್ರಾಧಿಕಾರವು ಅಸೋಸಿಯೇಷನ್‌ಗೆ ವಹಿಸಿ ಕೈಚೆಲ್ಲಿ
ಕುಳಿತಿದ್ದರ ಪರಿಣಾಮ ಉದ್ಯಾನವನ ಇಂದು ಅಧೋಗತಿಗೆ ತಲುಪಲು ಕಾರಣವಾಗಿದೆ ಎಂಬುದು ಸಾರ್ವಜನಿಕರ
ಆರೋಪವಾಗಿದ್ದು, ಇನ್ನಾದರೂ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರವು ಉದ್ಯಾನವನವನ್ನು
ಸಮರ್ಪಕವಾಗಿ ನಿರ್ವಹಣೆ ಕೈಗೊಂಡು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕೆಂಬುದು ಸ್ಥಳೀಯ
ನಿವಾಸಿಗಳು ಅಂಬೋಣ.

ಈ ಕುರಿತು ಪ್ರಾಧಿಕಾರದವರನ್ನು ಸಂಪರ್ಕಿಸಿದಾಗ ಉದ್ಯಾನವನ ಅಭಿವೃದ್ಧಿಗಾಗಿ ಅಗತ್ಯ ಅನುದಾನ ಕೋರಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಬಿಡುಗಡೆಯಾಗುತ್ತಿದ್ದಂತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಅದಕ್ಕೆ ಇನ್ನು ಎಷ್ಟು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next