Advertisement

ದಿವಾಕರನ ಸಾಹಸಗಳು

12:31 PM Feb 02, 2018 | Team Udayavani |

“ಬೆಲ್‌ ಬಾಟಮ್‌’ ಎನ್ನುವ ಚಿತ್ರವನ್ನು ಜಯತೀರ್ಥ ನಿರ್ದೇಶಿಸುತ್ತಿರುವುದು ಗೊತ್ತಿದ್ದೇ. ಪ್ರತಿ ಚಿತ್ರದಲ್ಲೂ ಒಂದೊಂದು ಹೊಸ ಜಾನರ್‌ ಪ್ರಯತ್ನಿಸುವ ಜಯತೀರ್ಥ ಈ ಬಾರಿ ಏನು ಮಾಡುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. “ಬೆಲೆ ಬಾಟಮ್‌’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ಈ ಸಂದರ್ಭದಲ್ಲಿ ತಮ್ಮ ಹೊಸ ಸಾಹಸದ ಬಗ್ಗೆ ಜಯತೀರ್ಥ ಹೇಳಿಕೊಂಡಿದ್ದಾರೆ.

Advertisement

ಈ ಬಾರಿ ಜಯತೀರ್ಥ ಒಂದು ಪತ್ತೇದಾರಿ ಸಿನಿಮಾ ಮಾಡುತ್ತಿದ್ದಾರೆ. ಪತ್ತೇದಾರಿ ದಿವಾಕರನ ಸಾಹಸಗಳನ್ನು ಈ ಚಿತ್ರದಲ್ಲಿ ಅವರು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. “ಇದೊಂದು ಜೇಮ್ಸ್‌ ಬಾಂಡ್‌ನಿಂದ ಸ್ಫೂರ್ತಿ ಪಡೆದ ಚಿತ್ರ. 80ರ ದಶಕದ ಕಾಲಘಟ್ಟದಲ್ಲಿ ದಿವಾಕರ ಎಂಬ ಕಾಲ್ಪನಿಕ ಪತ್ತೇದಾರನೊಬ್ಬನ ಕಥೆ ಇದು. ಮೊಬೈಲ್‌-ಟಿವಿ-ಸಿಸಿಟಿವಿ ಇಲ್ಲದ ಕಾಲಘಟ್ಟ, ಪೊಲೀಸರ ತನಿಖೆ, ಪತ್ತೇದಾರಿ ತಂತ್ರಗಳು ….

ಇವೆಲ್ಲಾ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಶೂಟಿಂಗ್‌ ಮಾತ್ರ ಡಿಜಿಟಲ್‌ನಲ್ಲಿ ಮಾಡುತ್ತಿದ್ದೇವೆ ಎನ್ನುವುದು ಬಿಟ್ಟರೆ, ಮಿಕ್ಕಿದ್ದೆಲ್ಲಾ 80ರ ದಶಕವೇ. ಅಂತಹದ್ದೊಂದು ಪರಿಸರ ಕಟ್ಟಿಕೊಡುವ ಸಲುವಾಗಿ ಬನವಾಸಿ, ಜೋಗ, ಶಿವಮೊಗ್ಗ, ಉಡುಪಿ, ಹಿರಿಯಡ್ಕ, ಹೆಬ್ರಿ ಮುಂತಾದ ಕಡೆ ಚಿತ್ರೀಕರಣ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜಯತೀರ್ಥ.

ಇಲ್ಲಿ ರಿಷಭ್‌ ಶೆಟ್ಟಿ, ಪತ್ತೇದಾರಿ ದಿವಾಕರನ ಪಾತ್ರ ಮಾಡಿದರೆ, ಕುಸುಮಾ ಎಂಬ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ-ನಿರ್ದೇಶಕ ಶಿವಮಣಿ ಇಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರಂತೆ. ವಿಶೇಷವೆಂದರೆ, ಚಿತ್ರದಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಭಿನ್ನ ಹೆಸರುಗಳು. ಜೋಡಿ ನಂಜಪ್ಪ, ಗೂಬೆ ಖಾನ್‌, ಸಗಣಿ ಪಿಂಟೋ, ರೇಡಿಯೋ ರಾಜ, ಮರಕುಟುಕ … ಹೀಗೆ ಒಂದೊಂದು ಪಾತ್ರಕ್ಕೂ ಒಂದೊಂದು ವಿಭಿನ್ನ ಹೆಸರಿಡಲಾಗಿದೆಯಂತೆ.

ಚಿತ್ರಕ್ಕೆ ಟಿ.ಕೆ. ದಯಾನಂದ್‌ ಅವರು ಕಥೆ ಬರೆದಿದ್ದು, ಮಾಭಿಷೇ, ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ ಮುಂತಾದ ಕಾದಂಬರಿಕಾರರ ಕಾದಂಬರಿಗಳನ್ನು ನೆನಪಿಸುವ ಕಥೆ ಇದಾಗಲಿದೆಯಂತೆ. ಒಂಥರಾ ಆ ಕಾದಂಬರಿಗಳಿಗೆ ಮತ್ತು ಪತ್ತೆದಾರರಿಗೆ ಇದೊಂದು ಚಿಕ್ಕ ಟ್ರಿಬ್ಯೂಟ್‌ ಎಂದು ಹೇಳಲು ಚಿತ್ರತಂಡ ಮರೆಯುವುದಿಲ್ಲ. ಈ ಚಿತ್ರವನ್ನು ಗೋಲ್ಡನ್‌ ಹಾರ್ಸ್‌ ಸಿನಿಮಾಸ್‌ನಡಿ ಸಂತೋಷ್‌ ಕುಮಾರ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next