Advertisement

30 ವರ್ಷಗಳಿಂದ ಡಾಮರು ಕಾಣದ ನಿಟ್ಟೆ-ಬಜಕಳ-ಹಾಳೆಕಟ್ಟೆ ಸಂಪರ್ಕ ರಸ್ತೆ

11:27 PM Sep 10, 2019 | Team Udayavani |

ಪಳ್ಳಿ: ನಿಟ್ಟೆ ಗ್ರಾಮದ ಬಜಕಳದಿಂದ ಹಾಳೆಕಟ್ಟೆ ಮಾರ್ಗವಾಗಿ ಕಲ್ಯಾ ಗ್ರಾಮ ಸಂಪರ್ಕಿಸುವ ಬಾಳೆಹಿತ್ಲು ಕೂಡುರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯುದ್ದಕ್ಕೂ ಬೃಹತ್‌ ಗಾತ್ರದ ಹೊಂಡ ನಿರ್ಮಾಣವಾಗಿರುವ ಕಾರಣ ವಾಹನ ಸಂಚಾರ ದುಸ್ತರವೆನಿಸಿದೆ. ಕಲ್ಯಾ ಗ್ರಾಮದಿಂದ ನಿಟ್ಟೆಯ ಬಜಕಳದ ವರೆಗಿನ ಸುಮಾರು 4ರಿಂದ 5 ಕಿ.ಮೀ. ಉದ್ದದ ಈ ರಸ್ತೆ 30 ವರ್ಷಗಳಿಂದ ಡಾಮರು ಭಾಗ್ಯ ಕಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

Advertisement

ಈಗಿರುವ ಡಾಮರು ಸಂಪೂರ್ಣ ಕಿತ್ತುಹೋಗಿ ಜಲ್ಲಿಕಲ್ಲು ಚೆಲ್ಲಾಪಿಲ್ಲಿ ಬಿದ್ದಿದೆ. ಈ ಭಾಗದಲ್ಲಿ ಕ್ರಶರ್‌ಗಳ ಕಾರ್ಯನಿರ್ವಹಣೆಯಿಂದ ಘನ ವಾಹನ ಗಳು ಹೆಚ್ಚಾಗಿ ಸಂಚರಿಸುವ ಕಾರಣ ರಸ್ತೆ ಮತ್ತಷ್ಟು ಹಾಳಾಗಿದೆ.

ಸಮಸ್ಯೆ ಕುರಿತು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಈ ರಸ್ತೆಯ ಕುರಿತು ಸ್ಥಳೀಯರಾದ ಮಂಜುನಾಥ ಶೆಟ್ಟಿ 2016ರಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, 4 ತಿಂಗಳ ಬಳಿಕ ಪತ್ರಕ್ಕೆ ಉತ್ತರ ಬಂದಿದೆಯಾದರೂ ರಸ್ತೆ ರಿಪೇರಿಗೆ ಅಧಿಕಾರಿಗಳು ಆಸಕ್ತಿ ತೋರಿಲ್ಲ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಲ್ಯಾ ಗ್ರಾಮಸ್ಥರಿಗೆ ನಿಟ್ಟೆಯ ಆರೋಗ್ಯ ಕೇಂದ್ರಕ್ಕೆ ತೆರಳಲು, ಬಾಳೆಹಿತ್ಲು-ಬೆಜಕಳ ಮಾರ್ಗವಾಗಿ ಕಾರ್ಕಳ ಸಂಚರಿಸಲು ಇದು ಅತಿ ಹತ್ತಿರದ ರಸ್ತೆ. ಕಲ್ಯಾ, ನಿಟ್ಟೆ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ಶೀಘ್ರ ದುರಸ್ತಿಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಕಲ್ಯಾ, ನಿಟ್ಟೆ ಗ್ರಾಮದ ಜನರ ಸಂಪರ್ಕ ಕೂಡುರಸ್ತೆಯ ಬಾಳೆಹಿತ್ಲು ಬಳಿ ಕಿರಿದಾದ ಸೇತುವೆ ಇದ್ದು, ಕೇವಲ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸುವಂತಾಗಿತ್ತು. ಇದೀಗ ಶಾಸಕರ ಮುತುವರ್ಜಿಯಲ್ಲಿ 1.35 ಕೋ. ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದ್ದು ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಸೇತುವೆ ಜತೆ ರಸ್ತೆಯೂ ಡಾಮರುಗೊಳ್ಳಬೇಕಿದೆ.

Advertisement

50 ಲಕ್ಷ ರೂ. ಅನುದಾನ

ಬಹುಬೇಡಿಕೆಯ ಹಾಳೆಕಟ್ಟೆ -ಬಜಕಳ ಸಂಪರ್ಕ ರಸ್ತೆಯ 2 ಕಿ.ಮೀ. ರಸ್ತೆ ಅಭಿವೃದ್ಧಿಗೆ ಶಾಸಕರ ವಿಶೇಷ ಮುತುವರ್ಜಿಯಲ್ಲಿ 50 ಲ. ರೂ. ಅನುದಾನ ಮಂಜೂರಾಗಿದ್ದು, ಸರ್ವೆ ಕಾರ್ಯ ಮುಗಿದಿದೆ. ಮಳೆಗಾಲ ಕಳೆದ ತತ್‌ಕ್ಷಣ ಡಾಮರು ಕಾಮಗಾರಿ ನಡೆಸಲಾಗುವುದು .
-ಸುಮಿತ್‌ ಶೆಟ್ಟಿ, ಜಿ.ಪಂ. ಸದಸ್ಯ

ಬೃಹತ್‌ ಸೇತುವೆ

ಕಲ್ಯಾ, ನಿಟ್ಟೆ ಗ್ರಾಮದ ಜನರ ಸಂಪರ್ಕ ಕೂಡುರಸ್ತೆಯ ಬಾಳೆಹಿತ್ಲು ಬಳಿ ಕಿರಿದಾದ ಸೇತುವೆ ಇದ್ದು, ಕೇವಲ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸುವಂತಾಗಿತ್ತು. ಇದೀಗ ಶಾಸಕರ ಮುತುವರ್ಜಿಯಲ್ಲಿ 1.35 ಕೋ. ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದ್ದು ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಸೇತುವೆ ಜತೆ ರಸ್ತೆಯೂ ಡಾಮರುಗೊಳ್ಳಬೇಕಿದೆ.
Advertisement

Udayavani is now on Telegram. Click here to join our channel and stay updated with the latest news.

Next