Advertisement
ಒಟ್ಟು 6 ಪಾರ್ಕ್‌ಗಳಲ್ಲಿ 2 ಪಾರ್ಕ್‌ಗಳ ಸಂಪೂರ್ಣ ಕಾಮಗಾರಿ ಮುಗಿದು ಅವುಗಳು ಈಗಾಗಲೇ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಉಳಿದ ನಾಲ್ಕು ಪಾರ್ಕ್‌ಗಳನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆಯ ಈ ಯೋಜನೆ 2016-17ರಲ್ಲಿ ಜಾರಿಗೆ ಬಂದಿದ್ದು, ಆ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಇಂತಹ ಒಟ್ಟು 50 ಟ್ರೀ ಪಾರ್ಕ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಅದರಂತೆ ನಗರದ ಹೊರವಲಯದ ತಣ್ಣೀರುಬಾವಿಯಲ್ಲಿ ಹಾಗೂ ಬಂಟ್ವಾಳದ ಐಬಿ ಕಚೇರಿ ಬಳಿಯಲ್ಲಿ ನಿರ್ಮಾಣಗೊಂಡಿರುವ ಟ್ರೀ ಪಾರ್ಕ್ ಈಗಾಗಲೇ ಸಾರ್ವಜನಿಕರಿಗಾಗಿ ತೆರೆದುಕೊಂಡಿದೆ. ಉಳಿದಂತೆ ಬಂಟ್ವಾಳದ ಆಲಂಪುರಿ, ಬೆಳ್ತಂಗಡಿಯ ಕಲ್ಲುಗುಡ್ಡೆ, ಪುತ್ತೂರಿನ ಬಿರುಮಲೆಗುಡ್ಡೆ ಹಾಗೂ ಸುಳ್ಯ ತಾಲೂಕು ಸುಬ್ರಹ್ಮಣ್ಯದ ಕುಮಾರಧಾರ ನದಿ ತಟಗಳಲ್ಲಿ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದ್ದು ಕೆಲಸ ಕಾರ್ಯಗಳು ನಡೆಯುತ್ತಿವೆ.
ಸಾಲು ಮರ ತಿಮ್ಮಕ್ಕ ಹೆಸರಿನೊಂದಿಗೆ ನಿರ್ಮಿತಗೊಳ್ಳುವ ಈ ಟ್ರೀ ಪಾರ್ಕ್‌ನಲ್ಲಿ ಕಲ್ಲು ಬೆಂಚುಗಳು, ಕುಡಿಯುವ ನೀರಿನ ವ್ಯವಸ್ಥೆ, ವಾಕಿಂಗ್ ಪಾತ್, ಕಾಡನ್ನು ಹೊಕ್ಕು ಅಲ್ಲಿನ ವನ್ಯ ಸಂಪತ್ತನ್ನು ವೀಕ್ಷಣೆ ಮಾಡಿದಂತೆ ಅನುಭವ ನೀಡುವ ವ್ಯವಸ್ಥೆ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವ ಆ್ಯಂಫಿ ಥಿಯೇಟರ್, ಶೌಚಾಲಯದ ವ್ಯವಸ್ಥೆ, ಔಷಧೀಯ ಸಸ್ಯ ಹಾಗೂ ವಿವಿಧ ಗಿಡಮೂಲಿಕೆಗಳ ಪ್ರದರ್ಶನ ಇರಲಿದೆ. ಇದಲ್ಲದೆ ಮಕ್ಕಳು ಮೋಜನ್ನನುಭವಿಸಲು ಅನುಕೂಲವಾಗುವಂತೆ ಪ್ರತ್ಯೇಕ ಸ್ಥಳವನ್ನೂ ನಿರ್ಮಿಸಲಾಗುತ್ತದೆ. ಪ್ರತಿಯೊಂದು ಪಾರ್ಕ್‌ಗೂ ಕನಿಷ್ಠ 50 ಲಕ್ಷ ರೂಪಾಯಿ ವ್ಯಯಿಸುವ ಉದ್ದೇಶ ಹೊಂದಿದ ಅರಣ್ಯ ಇಲಾಖೆ, ಉಳಿದಂತೆ ಆಯಾ ಪ್ರದೇಶಕ್ಕೆ ತಕ್ಕಂತೆ ವಿವಿಧ ವ್ಯವಸ್ಥೆ ಕಲ್ಪಿಸಲು ಹಣ ವ್ಯಯಿಸಲಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
Related Articles
ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಿ ವನ, ವನ್ಯಮೃಗಗಳ ಸಂರಕ್ಷಣೆಯಲ್ಲಿ ಜನರನ್ನು ತೊಡಗಿಸಿಕೊಳ್ಳುವುದೇ ಅರಣ್ಯ ಇಲಾಖೆಯ ಗುರಿ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಟ್ರೀ ಪಾರ್ಕ್ ನಿರ್ಮಿಸುವ ಗುರಿ ಹೊಂದಲಾಗಿದ್ದು ಮುಂದಿನ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಈ ಟ್ರೀ ಪಾರ್ಕ್‌ಗಳ ಕೆಲಸ ಸಂಪೂರ್ಣಗೊಂಡ ಬಳಿಕ ಅತೀ ಕಡಿಮೆ ಪ್ರವೇಶ ಶುಲ್ಕ ನಿಗದಿಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.
– ಡಾ| ವಿ. ಕರಿಕಳನ್,
ಅರಣ್ಯ ಸಂರಕ್ಷಣಾಧಿಕಾರಿ, ದ.ಕ. ಜಿಲ್ಲೆ
Advertisement
ಗಣೇಶ್ ಮಾವಂಜಿ