ಕಲಬುರಗಿ: ನಗರದ ಎಸ್.ಜಿ. ಎನ್ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಯುವ ವಿಜ್ಞಾನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ತನ್ನಲ್ಲಿರುವ ವಿಜ್ಞಾನ ಮನೋಭಾವ ಹೊರ ಸೂಸಿದರು.
ಶರಣಬಸವೇಶ್ವರರ ಪಬ್ಲಿಕ್ ಶಾಲೆ (ಎಸ್‌ಬಿಆರ್)ಯ ಹತ್ತನೇ ತರಗತಿ ವಿದ್ಯಾರ್ಥಿನಿ ಗಂಗಾಂಬಿಕಾ ದೇವಿಂದ್ರಪ್ಪ ಅವಂಟಿ ಪ್ರಸ್ತುತಪಡಿಸಿದ ವಿಜ್ಞಾನ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು. ಈ ಮೂಲಕ ಗಂಗಾಂಬಿಕಾ ಅವಂಟಿ ಯುವ ವಿಜ್ಞಾನಿ ಪ್ರಶಸ್ತಿ ಹಾಗೂ 5000 ನಗದು ಬಹುಮಾನ ಪಡೆದುಕೊಂಡು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಪ್ಲಾಷ್ಟಿಕ್ ಮುಕ್ತ ಮತ್ತು ನದಿ ಮತ್ತು ಕೆರೆ ನೀರಿನಲ್ಲಿ ಹಡಗಿನ ಮೂಲಕ ಪ್ಲಾಷ್ಟಿಕ್ ತೆಗೆದುಕೊಂಡು ಪುನಃ ಹೇಗೆ ಹಾಗೂ ಯಾವುದಕ್ಕೆ ಉಪಯೋಗಿಸಬೇಕೆಂಬ ಕುರಿತು ವಿಷಯ ಪ್ರಸ್ತುತ ಪಡಿಸಿ ಗಂಗಾಂಬಿಕಾ ಪ್ರಶಸ್ತಿ ಪಡೆದು ಹೊರ ಹೊಮ್ಮಿದಳು. ಅದೇ ರೀತಿ ಆಳಂದದ ವಿವೇಕರ್ವನಿ ಶಾಲೆಯ ವಿದ್ಯಾರ್ಥಿ ಮಹೇಕ್ ನಾಜ್ಮೀನ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾದರೆ ಇತರೆ ವಿದ್ಯಾರ್ಥಿಗಳು ಸಹ ಗಮನ ಸೆಳೆಯುವ ವಿಜ್ಞಾನ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದರು.
ಸರ್ ಎಂ ವಿಶ್ವೇಶ್ವರಯ್ಯ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಾದ ಡಾ| ಎಂ.ಎಸ್. ಜೋಗದ ಪ್ರಶಸ್ತಿ ಪ್ರದಾನಗೈದು, ವಿಜ್ಞಾನ-ತಂತ್ರಜ್ಞಾನ ವಿಷಯ ಅರಿಯಲು ಆಸಕ್ತಿ ಹಾಗೂ ತಲ್ಲೀನತೆ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ ಕಡ್ಲೆವಾಡ, ಡಾ| ಎಸ್.ಎಸ್.ಪಾಟೀಲ, ಶಿವಶರಣಪ್ಪ ಮೂಳೆಗಾಂವ, ಶಿಕ್ಷಕಿ ಪದ್ಮಾ ಸೇರಿದಂತೆ ಮುಂತಾದವರಿದ್ದರು.