ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಸಹಯೋಗದಲ್ಲಿ ಜ.25ರಮದು ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಂಶೋಧಕಿ ಡಾ.ವೈ.ಸಿ.ಭಾನುಮತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ರಾಷ್ಟ್ರಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪರಿಷತ್ತಿನ ಧ್ವಜ ಹಾಗೂ ಮಹಾರಾಣಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್ ನಾಡಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಗ್ಗೆ 9ಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಮ್ಮೇಳನಾಧ್ಯಕ್ಷ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಮಹಾರಾಣಿ ಕಲಾ ಕಾಲೇಜಿನಿಂದ ಆರಂಭವಾಗುವ ಮೆರವಣಿಗೆ ಮೆಟ್ರೋಪೋಲ್ ವೃತ್ತ, ಶಿವರಾಂ ಪೇಟೆ,ಚಿಕ್ಕ ಗಡಿಯಾರ ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಮತ್ತೆ ಮಹಾರಾಣಿ ಕಾಲೇಜು ಸೇರಲಿದೆ.
ಕಾಲೇಜಿನ ಸಂಚಿ ಹೊನ್ನಮ್ಮ ಸಭಾಂಗಣದ ಕಾದಂಬರಿಕಾರ್ತಿ ತ್ರಿವೇಣಿ ವೇದಿಕೆಯಲ್ಲಿ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭ ಬೆಳಗ್ಗೆ 11ಗಂಟೆಗೆ ನಡೆಯಲಿದೆ. ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಭಾವಾಂತರಾಳ ಕೃತಿಯನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಬಿಡುಗಡೆ ಮಾಡಲಿದ್ದು, ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವ ಸಾ.ರಾ.ಮಹೇಶ್, ಚಿತ್ರಕಲಾ ಪ್ರದರ್ಶನವನ್ನು ಸಚಿವ ಸಿ.ಎಸ್.ಪುಟ್ಟರಾಜು, ವೇದಿಕೆಯನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕ ತನ್ವೀರ್ ಸೇs… ಮುಖ್ಯದ್ವಾರ ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಡಗೂರು ಎಚ್.ವಿಶ್ವನಾಥ್, ಎಸ್.ಎ.ರಾಮದಾಸ್, ಸಂದೇಶ್ ನಾಗರಾಜ್ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯದ ನೆಲೆ-ಹಿನ್ನೆಲೆ ವಿಷಯ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಜಿಲ್ಲೆಯ ಮಹಿಳಾ ಸಾಹಿತ್ಯ ಮತ್ತು ಅಸ್ಮಿತೆ ಕುರಿತು ಕವಯಿತ್ರಿ ಡಾ.ಟಿ.ಸಿ.ಪೂರ್ಣಿಮಾ ವಿಷಯ ಮಂಡಿಸಲಿದ್ದಾರೆ. ಜಿಲ್ಲೆಗೆ ಮಹಿಳಾ ಸಾಹಿತಿಗಳ ಕೊಡುಗೆ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಡಾ.ಸಿ.ಜಿ.ಉಷಾದೇವಿ ವಿಚಾರ ಮಂಡಿಸಲಿದ್ದಾರೆ.
ಸಂಜೆ 5ಗಂಟೆಗೆ ಸಮಾರೋಪ ನಡೆಯಲಿದ್ದು, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಪ್ರೀತಿ ಶ್ರೀಮಂಧರ್‌ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ 14 ಮಂದಿ ಮಹಿಳಾ ಸಾಧಕರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್, ಪ್ರೊ.ಬಸವರಾಜು, ಎಂ.ಚಂದ್ರಶೇಖರ್, ಲತಾ ಮೋಹನ್ ಹಾಜರಿದ್ದರು.