ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಎಲೆಕ್ಟ್ರಿಕ್, ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ರಿಕ್ಷಾಗಳಿಗೆ ಮುಕ್ತವಾಗಿ ಸಂಚರಿಸಲು ಜಿಲ್ಲಾಧಿಕಾರಿಗಳು ನೀಡಿರುವ ಆದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.
ಬ್ಯಾಟರಿ ಚಾಲಿತ ರಿಕ್ಷಾಗಳನ್ನು ಜಿಲ್ಲೆಯೊಳಗೆ ಯಾವುದೇ ನಿರ್ಬಂಧವಿಲ್ಲದೆ ಚಲಾಯಿಸಲು ಮುಕ್ತ ಅವಕಾಶ ನೀಡಿ ಬ್ಯಾಟರಿ ಮತ್ತು ಇತರ ರಿಕ್ಷಾ ಚಾಲಕರು ಬೀದಿಯಲ್ಲಿ ಜಗಳವಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ತತ್‌ಕ್ಷಣ ಈ ಪ್ರಕಟನೆಯನ್ನು ಹಿಂಪಡೆದುಕೊಳ್ಳಬೇಕು.
ಸಾರಿಗೆ ಪ್ರಾಧಿಕಾರದ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಿಕ್ಷಾ ಚಾಲಕರು ಚಳವಳಿ ನಡೆಸುವುದು ಅನಿವಾರ್ಯ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಈಗಾಗಲೇ ದೂರವಾಣಿ ಮೂಲಕ ನಾವು ಸಂಪರ್ಕಿಸಿದ್ದು, ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ. ವಿಷ್ಣುಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.