ಕೋಲಾರ: ಕರ್ತವ್ಯದಲ್ಲಿದ್ದ ಬಂಗಾರಪೇಟೆ ತಹಶೀ ಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ್ ಅವರನ್ನು ಹತ್ಯೆಗೈದ ಆರೋಪಿಗಳ ವಿರುದ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನೌಕರರ ರಕ್ಷಣೆಗೆ ಕಠಿಣ ಕಾನೂನು ರೂಪಿಸು ವಂತೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟಿಸಿತು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕ್, ಜಮೀನು ವ್ಯಾಜ್ಯ ಸಂಬಂಧ ಸರ್ವೆ ಕಾರ್ಯ ನಡೆಸಲು ಹೋಗಿದ್ದ ತಹಶೀಲ್ದಾರ್ ಹತ್ಯೆಯಾಗಿರುವುದು ಖಂಡನೀಯ. ರಾಜ್ಯಾದ್ಯಂತ ಕಂದಾಯ, ಭೂ ಮಾಪನ, ಆರ್‌ಡಿಪಿಆರ್, ಆರೋಗ್ಯ ಇಲಾಖೆ ಸೇರಿ ಇತರೆ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದು, ಅಧಿಕಾರಿ, ನೌಕರ ವರ್ಗ ಆತಂಕದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ದೂರಿದರು.
ರಕ್ಷಣೆ ನೀಡಿ: ರಾಜ್ಯದಲ್ಲಿ ಕಠಿಣ ಕಾನೂನು ಜಾರಿಯಲ್ಲಿರದ ಕಾರಣ, ಇಂತಹ ಕೃತ್ಯಗಳು ಮರುಕಳಿಸುತ್ತಿದ್ದು, ತಹಶೀಲ್ದಾರ್ ಚಂದ್ರಮೌಳೇಶ್ವರ್ ಹತ್ಯೆ ಹಿನ್ನೆಲೆಯಲ್ಲಿ ವಿಶೇಷ ಕಾನೂನು ರೂಪಿಸಬೇಕು, ಕೊಲೆ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಸರ್ಕಾರಿ ನೌಕರರು ನಿರ್ಭೀತಿಯಿಂದ ಕಾರ್ಯನಿರ್ವ ಹಿಸುವ ವಾತಾವರಣ ನಿರ್ಮಾಣ ಮಾಡಲು ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
1 ಕೋಟಿ ರೂ. ಪರಿಹಾರ ಕೊಡಿ: ಮೃತರ ಕುಟುಂಬಕ್ಕೆ 50 ಲಕ್ಷ ರೂ.ನಿಂದ 1 ಕೋಟಿ ರೂ. ಪರಿಹಾರ ನೀಡಬೇಕು, ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಆರ್ಥಿಕ ಸೌಲಭ್ಯ ಗಳನ್ನು ಶೀಘ್ರವಾಗಿ ಬಿಡುಗಡೆಗೊಳಿ ಸಬೇಕು, ಆರೋಪಿಯ ಜಮೀನನ್ನು ಸರ್ಕಾರಮುಟ್ಟುಗೋಲುಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸರಕಾರಿ ನೌಕರರ ಸಂಘದ ಪದಾಧಿಕಾರಿ ಅನಿಲ್ ಕುಮಾರ್, ತಹಶೀಲ್ದಾರ್ ಹತ್ಯೆ ಕಂಡರೆ ನಾವು ಕರ್ನಾಟಕದಲ್ಲಿದ್ದೇವಾ ಅಥವಾ ಬಿಹಾರಲ್ಲಿದ್ದೇವಾ ಎಂಬ ಆತಂಕ ಕಾಡುತ್ತಿದೆ.
ತಾಲೂಕು ದಂಡಾಧಿಕಾರಿಗೆ ಈ ಗತಿಯಾದರೆ ಸಾಮಾನ್ಯ ನೌಕರರ ಪಾಡೇನು ಎಂದು ಪ್ರಶ್ನಿಸಿದರು. ಕಂದಾಯ ನಿರೀಕ್ಷಕ ರಮೇಶ್ ಮಾತನಾಡಿ, ಕಂದಾಯ ಇಲಾಖೆ ಮಾತೃ ಇಲಾಖೆ. ತಾಯಿ ಮೇಲೆ ಕೈಮಾಡುವುದು ದೇಶ ದ್ರೋಹದ ಕೆಲಸ. ನಿವೃತ್ತ ಶಿಕ್ಷಕ ವೆಂಕಟಾಚಲಪತಿಗೆ ಕಠಿಣ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿ ಯಬೇಕೆಂದರು.ಬಂಗಾರ ಪೇಟೆ ತಾಲೂಕು ನೌಕರರ ಸಂಘದ ಪದಾಧಿಕಾರಿ ಶಂಕರಪ್ಪ, ಉಪ ಪ್ರಾಂಶುಪಾಲ ರುದ್ರಪ್ಪ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ತಹಶೀಲ್ದಾರ್ ಹತ್ಯೆ ಖಂಡನೀಯ ವಾದುದು. ರಾಜ್ಯದ ಕೆಎಎಸ್ ಅಧಿಕಾರಿಗಳ ಸಂಘದಿಂದ ಈಗಾಗಲೇ ಸಿಎಂಗೆ ಮನವಿ ಸಲ್ಲಿಸ ಲಾಗಿದ್ದು, ವಿಶೇಷ ಕಾನೂನು ರೂಪಿಸಲು ಒತ್ತಾಯಿಸಲಾಗಿದೆ ಎಂದರು. ಸಂಘದ ಪ್ರತಿನಿಧಿ ಗಳಾದ ನಂದೀಶ್, ಮುರಳಿ ಮೋಹನ್, ಸದಾಶಿವರೆಡ್ಡಿ, ಜಯಪ್ರಕಾಶ್, ಪುರುಪೋತ್ತಮ್, ಮುಕುಂದ, ಗೌತಮ್, ಶ್ರೀರಾಮ್, ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.